ವಿಶ್ವದ ಶ್ರೀಮಂತ ಮಹಿಳೆಯರ ಸಾಲಿನಲ್ಲಿ ನೈಕಾದ ಫಾಲ್ಗುಣಿ ನಾಯರ್
ಸ್ವಪ್ರಯತ್ನದಿಂದ ಬಿಲಿಯಾಧೀಶೆಯಾದ ಭಾರತದ ಅತ್ಯಂತ ಶ್ರೀಮಂತ ಮಹಿಳೆ

ಮುಂಬೈ,ನ.10: ಸೌಂದರ್ಯವರ್ಧಕ ಸಾಮಾಗ್ರಿಗಳ ಸ್ಟಾರ್ಟ್ ಅಪ್ ಸಂಸ್ಥೆ ನೈಕಾದ ಸಂಸ್ಥಾಪಕಿ ಫಾಲ್ಗುಣಿ ನಾಯರ್ ಅವರು ಸ್ವಪ್ರಯತ್ನದಿಂದ ಬಿಲಿಯಾಧೀಶೆಯಾದ ಭಾರತದ ಅತ್ಯಂತ ಶ್ರೀಮಂತ ಮಹಿಳೆಯೆಂಬ ದಾಖಲೆಯನ್ನು ನಿರ್ಮಿಸಿದ್ದಾರೆ ಹಾಗೂ ಜಗತ್ತಿನ ಅತ್ಯಂತ ಶ್ರೀಮಂತ ಮಹಿಳೆಯರ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಶೇರುಮಾರುಕಟ್ಟೆಯಲ್ಲಿ ಬುಧವಾರ ನೈಕಾದ ಮಾತೃಸಂಸ್ಥೆ ಎಫ್‌ಎಸ್‌ಎನ್ ಇ-ಕಾಮರ್ಸ್‌ನ ಶೇರುಗಳ ವೌಲ್ಯದಲ್ಲಿ ಶೇ.78ರಷ್ಟು ಏರಿಕೆಯಾಗಿದ್ದು, ಸಂಸ್ಥೆಯ ಸಂಪತ್ತು 53.5 ಶತಕೋಟಿ ರೂಪಾಯಿಗಳಿಗೆ ತಲುಪಿದೆ.
ಫಾಲ್ಗುಣಿ ನಾಯರ್ ಅವರು ತನ್ನ 50ನೇ ವಯಸ್ಸಿನಲ್ಲಿ 2012ರಲ್ಲಿ ನೈಕಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ನೈಕಾ ಸಂಸ್ಥೆಯು ತನ್ನ ವೆಬ್‌ಸೈಟ್, ಅಪ್ಲಿಕೇಶನ್ ಹಾಗೂ 80ಕ್ಕೂ ಹೆಚ್ಚು ಮಳಿಗೆಗಳ ಮೂಲಕ ಪ್ರಸಾಧನ ಸಾಮಾಗ್ರಿಗಳು, ಸೌಂದರ್ಯವರ್ಧಕಗಳು ಹಾಗೂ ಫ್ಯಾಶನ್ ಬ್ರಾಂಡ್‌ಗಳನ್ನು ಒದಗಿಸುತ್ತದೆ. ಮಾರ್ಚ್‌ಗೆ ಕೊನೆಗೊಂಡ ಕಳೆದ ಹಣಕಾಸು ವರ್ಷದ ಅಂತ್ಯದಲ್ಲಿ ನೈಕಾ ಸಂಸ್ಥೆಯ ಶೇರುಗಳ ಮಾರಾಟದಲ್ಲಿ 35 ಶೇಕಡ ಏರಿಕೆಯಾಗಿದ್ದು, 330 ದಶಲಕ್ಷ ಡಾಲರ್ ಸಂಗ್ರಹಿಸಿತ್ತು.
ಲಾಭದಾಯಕವಾದ ಕಂಪೆನಿಯಾದ ನೈಕಾ, ಸಾರ್ವಜನಿಕ ಶೇರುಮಾರುಕಟ್ಟೆಗಳಿಗೆ ಪ್ರವೇಶ ಮಾಡಲು ಶಕ್ತವಾದ ಭಾರತದ ಕೆಲವೇ ಕೆಲವು ಇಂಟರ್‌ನೆಟ್ ಸ್ಟಾರ್ಟ್‌ಅಪ್ ಕಂಪೆನಿಗಳಲ್ಲೊಂದಾಗಿದೆ.
ಅಹಮದಬಾದ್‌ನ ಐಎಎಂ ಪದವೀಧರರಾದ ಫಾಲ್ಗುಣಿ ನಾಯರ್ ಎ.ಎಫ್.ಫರ್ಗೂಸನ್ ಕಂಪೆನಿಯ ಮೂಲಕ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದು. ಕೋಟಕ್ ಮಹೀಂದ್ರಾದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ 18 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು ಹಾಗೂ ಕೋಟಕ್ ಮಹೀದ್ರಾ ಬ್ಯಾಂಕ್, ಕೋಟಕ್ ಸೆಕ್ಯೂರಿಟೀಸ್‌ನಲ್ಲಿಯೂ ಅವರು ಕಾರ್ಯನಿರ್ವಹಿಸಿದ್ದರು.
1600ಕ್ಕೂ ಅಧಿಕ ಸಿಬ್ಬಂದಿ ವರ್ಗವನ್ನು ಹೊಂದಿರುವ ನೈಕಾ ಭಾರತದ ಪ್ರಮುಖ ಸೌಂದರ್ಯ ಪ್ರಸಾದನ ಸಾಮಾಗ್ರಿಗಳ ರಿಟೇಲ್ ಸಂಸ್ಥೆಯಾಗಿ ಹೊರಹೊಮ್ಮಿದೆ.