ಬೈರ್ಸ್ಟೋವ್ ವಿಫಲ ಕ್ಯಾಚ್ ಯತ್ನವೇ ನ್ಯೂಝಿಲ್ಯಾಂಡ್ ಸೋಲಿನ ಸುಳಿಯಿಂದ ಹೊರಬರಲು ಪ್ರಮುಖ ಕಾರಣ: ವಿಶ್ಲೇಷಣೆ
ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಸೆಮಿ-ಫೈನಲ್

photo: Instagram
ಅಬುಧಾಬಿ: ಇಂಗ್ಲೆಂಡ್ ತಂಡವನ್ನು ನ್ಯೂಝಿಲ್ಯಾಂಡ್ ಬುಧವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಐದು ವಿಕೆಟ್ಗಳಿಂದ ಸೋಲಿಸಿ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಫೈನಲ್ ತಲುಪಿದೆ. 17ನೇ ಓವರ್ ನಲ್ಲಿ ಬೈರ್ ಸ್ಟೋವ್ ವಿಫಲ ಕ್ಯಾಚ್ ಪ್ರಯತ್ನ ನ್ಯೂಝಿಲ್ಯಾಂಡ್ ಸೋಲಿನ ದವಡೆಯಿಂದ ಹೊರಬರಲು ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
ಅತ್ಯಂತ ಪೈಪೋಟಿಯಿಂದ ಕೂಡಿದ್ದ ಸೆಮಿ-ಫೈನಲ್ ಸೆಣಸಾಟದಲ್ಲಿ ನ್ಯೂಝಿಲ್ಯಾಂಡ್ 167 ರನ್ಗಳ ಗುರಿಯನ್ನು ಬೆನ್ನಟ್ಟಿದ ಸಂದರ್ಭದಲ್ಲಿ ಡೆರಿಲ್ ಮಿಚೆಲ್ ಹಾಗೂ ಜಿಮ್ಮಿ ನೀಶಮ್ ಅವರ ಪವರ್-ಹಿಟ್ಟಿಂಗ್ ಪ್ರದರ್ಶನದಿಂದಾಗಿ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಿತು.
ನ್ಯೂಝಿಲ್ಯಾಂಡ್ ನ ರನ್ ಚೇಸಿಂಗ್ ನ ವೇಳೆ 17 ನೇ ಓವರ್ ತನಕ ಇಯಾನ್ ಮೊರ್ಗನ್ ತಂಡ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತ್ತು. 17 ನೇ ಓವರ್ಗೆ ಮೊದಲು ನ್ಯೂಝಿಲ್ಯಾಂಡ್ ನಾಲ್ಕು ವಿಕೆಟ್ಗೆ 110 ರನ್ ಗಳಿಸಿತು ಹಾಗೂ ಗೆಲುವಿಗೆ 24 ಎಸೆತಗಳಲ್ಲಿ 57 ರನ್ಗಳ ಅಗತ್ಯವಿತ್ತು. ಮೊರ್ಗನ್ ಅವರು ಕ್ರಿಸ್ ಜೋರ್ಡನ್ ಅವರನ್ನು 17 ನೇ ಓವರ್ ನಲ್ಲಿ ಬೌಲ್ ಮಾಡಲು ಕಳುಹಿಸಿದರು.
ಆ ಓವರ್ನ ಮೊದಲ ಎಸೆತವನ್ನು ಸಿಕ್ಸರ್ಗೆ ಅಟ್ಟಿದ ನೀಶಾಮ್, ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ವೈಡ್ ನಂತರ ನಾಲ್ಕನೇ ಎಸೆತದಲ್ಲಿ ನೀಶಾಮ್ ನಿಧಾನಗತಿಯ ಎಸೆತವನ್ನು ಎದುರಿಸಿದರು. ಆಲ್ ರೌಂಡರ್ ನೀಶಾಮ್ ಲೆಗ್ ಸೈಡ್ ಕಡೆಗೆ ಎತ್ತರಕ್ಕೆ ಚೆಂಡನ್ನು ಹ್ಯಾಕ್ ಮಾಡಿದರು. ಆಗ ಧಾವಿಸಿ ಬಂದ ಜಾನಿ ಬೈರ್ಸ್ಟೋವ್ ಚೆಂಡನ್ನು ಹಿಡಿಯಲು ಡೈವ್ ಮಾಡಿದರು. ಆದಾಗ್ಯೂ, ಬೈರ್ಸ್ಟೋವ್ ಬೌಂಡರಿ ಹಗ್ಗಗಳ ಮೇಲೆ ಬಿದ್ದು ಚೆಂಡನ್ನು ಲಿಯಾಮ್ ಲಿವಿಂಗ್ಸ್ಟೋನ್ಗೆ ರವಾನಿಸಿದರು.
ಆಗ ಇಂಗ್ಲೆಂಡ್ ಆಟಗಾರರು ಸಂಭ್ರಮಿಸತೊಡಗಿದರು. ಆದಾಗ್ಯೂ, ರಿಪ್ಲೇ ನಲ್ಲಿ ಚೆಂಡನ್ನು ಸಹ ಆಟಗಾರನಿಗೆ ರವಾನಿಸುವ ಮೊದಲು ಬೈರ್ಸ್ಟೋವ್ ಅವರ ಮೊಣಕಾಲು ಬೌಂಡರಿಲೈನ್ ಹಗ್ಗಕ್ಕೆ ತಗಲಿರುವುದು ಕಂಡುಬಂತು.
ಪಂದ್ಯಾವಳಿಯ ಅಧಿಕೃತ ಹ್ಯಾಂಡಲ್ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.