ಹೋಟೆಲ್ ಉದ್ಘಾಟನೆ ವೇಳೆ ಪ್ರಚೋದನಾತ್ಮಕ ಭಾಷಣ ಆರೋಪ: ಹಿಂದುತ್ವ ಕಾರ್ಯಕರ್ತ, ವೈದ್ಯನ ವಿರುದ್ಧ ಎಫ್ಐಆರ್
Photo: Twitter/MuslimMirror.com
ಅಹ್ಮದಾಬಾದ್: ಆನಂದ್ ನಗರದಲ್ಲಿ ಹೋಟೆಲ್ ಒಂದರ ಉದ್ಘಾಟನೆ ವೇಳೆ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪದ ಮೇಲೆ ಓರ್ವ ಹಿಂದುತ್ವ ಕಾರ್ಯಕರ್ತ ಪಿಂಕಲ್ ಭಾಟಿಯಾ ಹಾಗೂ ಕ್ಯಾನ್ಸರ್ ತಜ್ಞ ಶೈಲೇಶ್ ಶಾ ಅವರ ವಿರುದ್ಧ ಗುಜರಾತ್ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿದ್ದಾರೆ. ಇಬ್ಬರ ವಿರುದ್ಧವೂ ಐಪಿಸಿ ಸೆಕ್ಷನ್ 295ಎ ಹಾಗೂ 144 ಅನ್ವಯ ಪ್ರಕರಣ ದಾಖಲಿಸಲಾಗಿದೆ The Indian Express ವರದಿ ಮಾಡಿದೆ.
ಓರ್ವ ಹಿಂದೂ ವ್ಯಕ್ತಿ ಹಾಗೂ ಇಬ್ಬರು ಮುಸ್ಲಿಮರ ನಡುವಿನ ಪಾಲುದಾರಿಕೆಯಲ್ಲಿ ಆರಂಭಗೊಂಡಿದ್ದ 'ಬ್ಲೂ ಐವಿ' ಹೋಟೆಲ್ ಉದ್ಘಾಟನೆಯನ್ನು ವಿರೋಧಿಸಿ ಅಕ್ಟೋಬರ್ 24ರಮದು ಪ್ರತಿಭಟನೆ ನಡೆಸಲಾಗಿತ್ತು. 'ಭಾರತ್ ಮಾತಾ ಕಿ ಜೈ' ಹಾಗೂ 'ಜೈ ಶ್ರೀ ರಾಮ್' ಘೋಷಣೆಗಳನ್ನು ಕೂಗಿದ ಜನರ ಒಂದು ಗುಂಪು ರಸ್ತೆಯನ್ನು ಶುದ್ಧೀಕರಿಸಲು 'ಗಂಗಾ ಜಲ' ಪ್ರೋಕ್ಷಣೆ ಮಾಡುತ್ತಿರುವುದೂ ಪ್ರತಿಭಟನೆಯ ವೀಡಿಯೋದಲ್ಲಿ ಕಾಣಿಸುತ್ತದೆ.
"ಆದರೆ ಈ ಪ್ರತಿಭಟನೆ ಯಾವುದೇ ಒಂದು ಸಮುದಾಯದ ವಿರುದ್ಧವಲ್ಲ, ನಮ್ಮ ಪ್ರತಿಭಟನೆ ಹೋಟೆಲ್ನ ಅಕ್ರಮ ನಿರ್ಮಾಣದ ವಿರುದ್ಧ. ಆದರೆ ಪ್ರತಿಭಟನೆ ವೇಳೆ ಕೆಲವರು ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ,'' ಎಂದು ಶೈಲೇಶ್ ಶಾ ಹೇಳಿದ್ದಾರೆ.
ಹೋಟೆಲ್ ಪಕ್ಕದ ನಿವಾಸಿಯಾಗಿರುವ ಶಾ ಅವರು ಹೋಟೆಲ್ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಗುಜರಾತ್ ಹೈಕೋರ್ಟ್ ಮೆಟ್ಟಿಲನ್ನೂ ಹತ್ತಿದ್ದು ಪ್ರಕರಣ ಪ್ರಸ್ತುತ ವಿಚಾರಣೆ ಹಂತದಲ್ಲಿದೆ.