ಪಂಜಾಬ್ ವಿಧಾನಸಭೆಯಲ್ಲಿ ಕೇಂದ್ರದ ಬಿಎಸ್‌ಎಫ್ ಆದೇಶದ ವಿರುದ್ಧ ನಿರ್ಣಯ ಅಂಗೀಕಾರ

ಚಂಡಿಗಡ: ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿದ ಕೇಂದ್ರದ ಅಧಿಸೂಚನೆಯ ವಿರುದ್ಧ ಪಂಜಾಬ್ ವಿಧಾನಸಭೆ ಗುರುವಾರ ನಿರ್ಣಯವನ್ನು ಅಂಗೀಕರಿಸಿತು. ಇದು ರಾಜ್ಯ ಪೊಲೀಸರಿಗೆ ಮಾಡಿರುವ "ಅವಮಾನ" ಎಂದು ಕರೆದಿದೆ ಹಾಗೂ ಅದನ್ನು ಹಿಂತೆಗೆದುಕೊಳ್ಳುವಂತೆ ಕೋರಿದೆ.
ರಾಜ್ಯ ವಿಧಾನಸಭೆಯ ಇಬ್ಬರು ಬಿಜೆಪಿ ಸದಸ್ಯರ ಅನುಪಸ್ಥಿತಿಯಲ್ಲಿ ಕೇಂದ್ರದ ಆದೇಶವನ್ನು "ತಿರಸ್ಕರಿಸುವ" ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿತು.
ಪಂಜಾಬ್, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನ ಅಂತರ್ ರಾಷ್ಟ್ರೀಯ ಗಡಿಯಿಂದ ಅಸ್ತಿತ್ವದಲ್ಲಿರುವ 15 ಕಿಲೋಮೀಟರ್‌ನಿಂದ 50 ಕಿಮೀ ವ್ಯಾಪ್ತಿಯಲ್ಲಿ ಶೋಧ, ವಶಪಡಿಸಿಕೊಳ್ಳುವಿಕೆ ಹಾಗೂ ಬಂಧನವನ್ನು ಕೈಗೊಳ್ಳಲು ಗಡಿ ಕಾವಲು ಪಡೆಗೆ ಅಧಿಕಾರ ನೀಡಲು ಕೇಂದ್ರ ಸರಕಾರ ಕಳೆದ ತಿಂಗಳು ಬಿಎಸ್‌ಎಫ್ ಕಾಯ್ದೆಗೆ ತಿದ್ದುಪಡಿ ತಂದಿದೆ.
ಪಂಜಾಬ್ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಅವರು ನಿರ್ಣಯವನ್ನು ಮಂಡಿಸಿದರು.
"ಪಂಜಾಬ್ ಹುತಾತ್ಮರ ನಾಡು", "ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಅನುಕರಣೀಯ ತ್ಯಾಗ ಮಾಡಿದ್ದಾರೆ" ಎಂದು ನಿರ್ಣಯ ಹೇಳಿದೆ.
ಪಂಜಾಬ್ ಪೊಲೀಸರು ಒಂದು ಅನನ್ಯ ದೇಶಭಕ್ತಿಯ ಶಕ್ತಿಯಾಗಿದ್ದು, ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಭಾರತದ ಸಂವಿಧಾನದ ಪ್ರಕಾರ, ಕಾನೂನು ಹಾಗು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ ಹಾಗೂ ಈ ಉದ್ದೇಶಕ್ಕಾಗಿ ಪಂಜಾಬ್ ಸರಕಾರವು ಸಂಪೂರ್ಣ ಸಮರ್ಥವಾಗಿದೆ. ಕೇಂದ್ರ ಸರಕಾರವು ಗಡಿ ಭದ್ರತಾ ಪಡೆ (ಬಿಎಸ್ ಎಫ್) ವ್ಯಾಪ್ತಿಯನ್ನು 15 ಕಿ.ಮೀ ನಿಂದ 50 ಕಿ.ಮೀ ವರೆಗೆ ವಿಸ್ತರಿಸುವ ನಿರ್ಧಾರವು ರಾಜ್ಯ ಪೊಲೀಸರು ಹಾಗೂ ಪಂಜಾಬ್‌ನ ಜನರ ಮೇಲಿನ ಅಪನಂಬಿಕೆಯ ಅಭಿವ್ಯಕ್ತಿಯಾಗಿದೆ. ಇದು ಅವರ ಅವಮಾನವೂ ಹೌದು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.