ನಿರ್ಲಕ್ಷ್ಯದ ಆರೋಪ: ಸರಕಾರದ ವಿಚಾರಣೆಯಲ್ಲಿ ಕ್ಲೀನ್ ಚಿಟ್ ನೀಡಿದ 2 ವರ್ಷಗಳ ಬಳಿಕ ಡಾ. ಕಫೀಲ್ ಖಾನ್ ವಜಾ

ಲಕ್ನೊ , ನ. 11: ಗೋರಖ್ಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜಿನ ಶಿಶುರೋಗ ತಜ್ಞ ಡಾ ಕಫೀಲ್ ಖಾನ್ ಅವರನ್ನು ಉತ್ತರಪ್ರದೇಶದ ಆದಿತ್ಯನಾಥ್ ಸರಕಾರ ವಜಾಗೊಳಿಸಿದೆ.
ಮೆದುಳು ರೋಗದಿಂದ ಸಾವು ಸಂಭವಿಸಿದ ಪ್ರಕರಣದಲ್ಲಿ ನಿರ್ಲಕ್ಷ ಹಾಗೂ ಭ್ರಷ್ಟಾಚಾರದ ಆರೋಪದಲ್ಲಿ ಅವರು ಮೊದಲ ಬಾರಿಗೆ ವಜಾಗೊಂಡ ಬಳಿಕ ನಾಲ್ಕು ವರ್ಷಗಳ ಬಳಿಕ ಈಗ ಮತ್ತೆ ವಜಾ ಮಾಡಲಾಗಿದೆ.
ಸರಕಾರದ ವಿಚಾರಣೆ ಅವರ ಈ ಆರೋಪಗಳಿಂದ ಮುಕ್ತಗೊಳಿಸಿತ್ತು. ಆದರೆ, 2019ರ ಇನ್ನೊಂದು ಪ್ರಕರಣದಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ಅಮಾನತಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ಈ ವರ್ಷದ ಆರಂಭದಲ್ಲಿ ತಡೆ ವಿಧಿಸಿತ್ತು.
ಕಫೀಲ್ ಖಾನ್ ಅವರು ವಜಾ ಆದೇಶದ ಬಗ್ಗೆ ಗುರುವಾರ ಟ್ವೀಟ್ನಲ್ಲಿ ದೃಢಪಡಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಅನ್ಯಾಯವಾಗಿರುವುದಾಗಿ ಹೇಳಿದ್ದಾರೆ. ವಜಾ ಆದೇಶವನ್ನು ಬಿಡುಗಡೆ ಮಾಡಲಾಗಿದೆ ಎಂದು ಉತ್ತರಪ್ರದೇಶದ ವೈದ್ಯಕೀಯ ಶಿಕ್ಷಣದ ಪ್ರಾಥಮಿಕ ಕಾರ್ಯದರ್ಶಿ ಅಲೋಕ್ ಕುಮಾರ್ ದೃಢಪಡಿಸಿದ್ದಾರೆ.
ಕಫೀಲ್ ಖಾನ್ ಸೇವೆಯನ್ನು ರದ್ದುಗೊಳಿಸುವುದಕ್ಕೆ ಉತ್ತರಪ್ರದೇಶ ಸಾರ್ವಜನಿಕ ಸೇವಾ ಆಯೋಗ ಅನುಮೋದನೆ ನೀಡಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಔಪಚಾರಿಕ ಆದೇಶಕ್ಕಾಗಿ ಕಾಯುತ್ತಿದ್ದೇನೆ. ಆದರೆ, ತಾನು ಈ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
‘‘ಈ ಸರಕಾರ ಮುಂದಿನ ಕೆಲವು ತಿಂಗಳುಗಳು ಮಾತ್ರ ಇರಲಿದೆ. ಅವರು ಈಗಲೂ ಇಂತಹ ತಂತ್ರ ಮಾಡುತ್ತಿದ್ದಾರೆ. ಯಾವುದು ತಪ್ಪು ಹಾಗೂ ಯಾವುದು ಸರಿ ಎಂಬುದನ್ನು ಕಾಲ ಹೇಳಲಿದೆ’’ ಎಂದು ಕಫೀಲ್ ಖಾನ್ ಹೇಳಿದ್ದಾರೆ.