ಉಡುಪಿ: ಪ್ರವೇಶ ಪರೀಕ್ಷೆ ಹಿನ್ನೆಲೆ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ
ಉಡುಪಿ, ನ.11: ಜಿಲ್ಲೆಯಲ್ಲಿ ವಿವಿಧ ಕೋರ್ಸ್ಗಳಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ನ.13 ಮತ್ತು 14ರಂದು ನಗರದ ಕುಂಜಿಬೆಟ್ಟಿನ ಎಂಜಿಎಂ ಕಾಲೇಜು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನಡೆಯಲಿದ್ದು, ಪರೀಕ್ಷೆಗಳು ಶಾಂತಿಯುತವಾಗಿ ನಡೆಯಲು ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಡಿಪ್ಲೋಮಾ ಅಭ್ಯರ್ಥಿಗಳಿಗೆ ಲ್ಯಾಟರಲ್ ಪ್ರವೇಶದ ಮೂಲಕ ಹಗಲು ಮತ್ತು ಸಂಜೆ ಇಂಜಿನಿಯರಿಂಗ್ ಕಾಲೇಜುಗಳಿಗೆ ಎರಡನೇ ವರ್ಷದ ಅಥವಾ ಮೂರನೇ ಸೆಮಿಸ್ಟರ್ನ ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಮೊದಲನೇ ವರ್ಷದ ಅಥವಾ ಒಂದನೇ ಸೆಮಿಸ್ಟರ್ನ (ಪೂರ್ಣಾವಧಿ / ಅರೆಕಾಲಿಕ) ಎಂ.ಬಿ.ಎ., ಎಂ.ಸಿ.ಎ, ಎಂ.ಇ, ಎಂ.ಟೆಕ್, ಎಂ.ಆರ್ಕಿಟೆಕ್ಟರ್ ಕೋರ್ಸ್ಗಳ ಪ್ರವೇಶಕ್ಕಾಗಿ ಪಿಜಿ ಸಿಇಟಿ ಪರೀಕ್ಷೆಗಳು ನ.13 ಮತ್ತು 14ರಂದು ನಡೆಯಲಿವೆ.
ಪರೀಕ್ಷೆಗಳು ಮುಕ್ತಾಯವಾಗುವವರೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಶಿಸ್ತು ಮತ್ತು ಶಾಂತಿಯನ್ನು ಕಾಪಾಡುವ ಸಲುವಾಗಿ ನಿಗದಿ ಪಡಿಸಿದ ಪರೀಕ್ಷಾ ಕೇಂದ್ರಗಳ ಸುತ್ತಲೂ 200ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 144(1)ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್. ಎಂ. ಆದೇಶ ಹೊರಡಿಸಿದ್ದಾರೆ.