ಬಿಲ್ ಪಾವತಿಸಿದ್ದರೂ ವಿದ್ಯುತ್ ಸಂಪರ್ಕ ಕಡಿತ: ನಷ್ಟ ಭರಿಸಲು ಮೆಸ್ಕಾಂಗೆ ದ.ಕ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ
ಮಂಗಳೂರು: ನಿಗದಿತ ದಿನದ ಮೊದಲೇ ವಿದ್ಯುತ್ ಬಿಲ್ ಪಾವತಿಸಿದ ಗ್ರಾಹಕರಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ನಷ್ಟ ಉಂಟು ಮಾಡಿರುವ ಬಗ್ಗೆ ಉಳ್ಳಾಲದ ಮಿಲ್ಲತ್ ನಗರದ ನಿವಾಸಿ ಮಾನವ ಹಕ್ಕುಗಳ ಹೋರಾಟಗಾರ ಪಿಯುಸಿ ಎಲ್ ನ ಮಾಜಿ ಅಧ್ಯಕ್ಷ ಮುಹಮ್ಮದ್ ಕಬೀರ್ ಅವರು ನೀಡಿರುವ ದೂರಿನ ಬಗ್ಗೆ ವಿಚಾರಣೆ ನಡೆಸಿದ ದ.ಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದ್ರಿ ಗ್ರಾಹಕರಿಗೆ ಆಗಿರುವ ನಷ್ಟವನ್ನು ಮೆಸ್ಕಾಂ ಭರಿಸಲು ಆದೇಶ ನೀಡಿ ತೀರ್ಪು ನೀಡಿದೆ.
ಮುಹಮ್ಮದ್ ಕಬೀರ್ ಎಂಬವರು ತಾವು ವಾಸವಿರುವ ಬಾಡಿಗೆ ಮನೆಯ ವಿದ್ಯುತ್ ಬಳಕೆಯ ಬಿಲ್ ಮೊತ್ತವನ್ನು ಪಾವತಿಸಬೇಕಾದ ನಿಗದಿತ ದಿನ ಜೂನ್ 27, 2018 ಆಗಿತ್ತು. ಕಬೀರ್ ರವರು ಜೂನ್ 14, 2018 ರಂದು ಮುಂಚಿತವಾಗಿಯೇ ಬಿಲ್ ಪಾವತಿಸಿದ್ದರು. ಆದರೆ ಉಳ್ಳಾಲ ವಲಯದ ಮೆಸ್ಕಾಂ ಇಲಾಖೆ ಜೂನ್ 15, 2018 ರಂದು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಮನೆಯ ಸಂಪೂರ್ಣ ವಿದ್ಯುತ್ ಸಂಪರ್ಕವನ್ನು ಲೈನ್ ಮ್ಯಾನ್ ಮೂಲಕ ಯಾವುದೇ ಸೂಚನೆ ನೀಡದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆನ್ನಲಾಗಿದೆ. ಜೂನ್ 19, 2018ರಂದು ಕಬೀರ್ ಅವರು ಮನೆಗೆ ಬಂದಾಗ ಸಂಪೂರ್ಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದು ತಿಳಿದು ಬಂದಿದೆ. ಈ ಬಗ್ಗೆ ಮೆಸ್ಕಾಂ ಲೈನ್ ಮ್ಯಾನ್ ಬಳಿ ವಿಚಾರಿಸಿದಾಗ ಮೇಲಾಧಿಕಾರಿಯ ಸೂಚನೆಯ ಪ್ರಕಾರ ತಾನು ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಇದರಿಂದ ನನ್ನ ಮನೆಯ ಫ್ರಿಟ್ಜ್ ನಲ್ಲಿದ್ದ ಆಹಾರ ಸಾಮಾಗ್ರಿ ಹಾಳಾಗಿ ನನಗೆ ನಷ್ಟವಾಗಿದೆ. ತನಗೆ ಅಗಿರುವ ನಷ್ಟದ ಪರಿಹಾರವನ್ನು ಮೆಸ್ಕಾಂ ಭರಿಸಬೇಕೆಂದು ಸೆ.29, 2018 ರಂದು ದ.ಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗ ಗ್ರಾಹಕರಿಗೆ ಆಗಿರುವ ನಷ್ಟ ರೂ. 4000 ಮತ್ತು ಪ್ರಕರಣದ ದೂರು ದಾಖಲಿಸಲು ಆಗಿರುವ ಖರ್ಚು ರೂ. 5000ವನ್ನು ಉಳ್ಳಾಲ ಮೆಸ್ಕಾಂ ವಲಯದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಮೆಸ್ಕಾಂ ಅತ್ತಾವರ ಒಂದನೆ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಭರಿಸಲು ಆದೇಶಿಸಿ ತೀರ್ಪು ನೀಡಿದೆ.
ದೂರುದಾರರ ಪರವಾಗಿ ನ್ಯಾಯವಾದಿ ಪರಮೇಶ್ವರ ಜೊಯಿಷ್ ಮತ್ತು ಮುಹಮ್ಮದ್ ಅನ್ಸಾರ್ ವಾದ ಮಂಡಿಸಿದ್ದಾರೆ.