ಟ್ವೆಂಟಿ-20 ವಿಶ್ವಕಪ್: ಆಸ್ಟ್ರೇಲಿಯ ಫೈನಲ್ ಗೆ ಲಗ್ಗೆ, ರವಿವಾರ ನ್ಯೂಝಿಲ್ಯಾಂಡ್ ಎದುರಾಳಿ
ಪಾಕಿಸ್ತಾನ ವಿರುದ್ಧ ರೋಚಕ ಗೆಲುವು

photo: twitter.com/FirstpostSports
ದುಬೈ, ನ.11: ಮಾರ್ಕಸ್ ಸ್ಟೋನಿಸ್(ಔಟಾಗದೆ 40) ಹಾಗೂ ಮ್ಯಾಥ್ಯೂ ವೇಡ್(ಔಟಾಗದೆ 41) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯ ತಂಡ ಗುರುವಾರ ಪಾಕಿಸ್ತಾನ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ನ ದ್ವಿತೀಯ ಸೆಮಿ ಫೈನಲ್ ಪಂದ್ಯವನ್ನು 5 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಫೈನಲ್ ಗೆ ಪ್ರವೇಶಿಸಿದೆ.
ರವಿವಾರ ನಡೆಯಲಿರುವ ಫೈನಲ್ ನಲ್ಲಿ ಆಸ್ಟ್ರೇಲಿಯವು ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ.
ಗೆಲ್ಲಲು 177 ರನ್ ಗುರಿ ಯಶಸ್ವಿಯಾಗಿ ಬೆನ್ನಟ್ಟಿದ ಆಸ್ಟ್ರೇಲಿಯ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ಆಸಿಸ್ ಗೆಲುವಿಗೆ ಅಂತಿಮ 12 ಎಸೆತಗಳಲ್ಲಿ 22 ರನ್ ಅಗತ್ಯವಿತ್ತು. ಆಗ ಶಾಹೀನ್ ಅಫ್ರಿದಿ ಬೌಲಿಂಗ್ ನಲ್ಲಿ ಸತತ ಮೂರು ಸಿಕ್ಸರ್ ಗಳನ್ನು ಸಿಡಿಸಿದ ವೇಡ್ ಆಸ್ಟ್ರೇಲಿಯ ಇನ್ನೂ 1 ಓವರ್ ಬಾಕಿ ಇರುವಾಗಲೇ ಫೈನಲ್ ಪ್ರವೇಶಿಸಲು ಕಾರಣರಾದರು. 19ನೆ ಓವರ್ 3ನೇ ಎಸೆತದಲ್ಲಿ ಹಸನ್ ಅಲಿ ಅವರು ವೇಡ್ ನೀಡಿದ್ದ ಸುಲಭ ಕ್ಯಾಚ್ ನ್ನು ಕೈಚೆಲ್ಲಿದ್ದು ಪಾಕಿಸ್ತಾನಕ್ಕೆ ದುಬಾರಿಯಾಯಿತು.
ಪಾಕಿಸ್ತಾನದ ಪರ ಶಾದಾಬ್ ಖಾನ್(4-26)ಯಶಸ್ವಿ ಬೌಲರ್ ಎನಿಸಿಕೊಂಡರು.
ಆಸೀಸ್ ಪರ ಆರಂಭಿಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್(49, 30 ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಗೂ ಮಿಚೆಲ್ ಮಾರ್ಷ್ 28 ರನ್ ಗಳಿಸಿದರು. ನಾಯಕ ಫಿಂಚ್ ರನ್ ಖಾತೆ ತೆರೆಯುವ ಮೊದಲೇ ಮೊದಲ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು.