ಭಾರತದಲ್ಲೂ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್?
ಹೈದರಾಬಾದ್, ನ.12: ದೇಶದಲ್ಲಿ ಕೋವಿಡ್-19 ಸೋಂಕಿನ ವಿರುದ್ಧದ ಲಸಿಕೆಯ ಬೂಸ್ಟರ್ ಡೋಸ್ ನೀಡುವ ಬಗೆಗಿನ ನೀತಿಯನ್ನು ಭಾರತ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ದೇಶದ ಕೋವಿಡ್-19 ಕಾರ್ಯಪಡೆಯ ಪ್ರಮುಖ ಸದಸ್ಯರೊಬ್ಬರು ಬಹಿರಂಗಪಡಿಸಿದ್ದಾರೆ.
"ಜನತೆ ಸದ್ಯಕ್ಕೆ ಯಾವುದೇ ಬೂಸ್ಟರ್ ಡೋಸ್‌ಗಳನ್ನು ಪಡೆದುಕೊಳ್ಳಬಾರದು; ಏಕೆಂದರೆ ಇದನ್ನು ಪ್ರಮಾಣಪತ್ರಕ್ಕೆ ಪರಿಗಣಿಸಲಾಗುವುದಿಲ್ಲ. ಕಳೆದ ಮೂರು ವಾರಗಳಿಂದ ಈ ಬಗ್ಗೆ ನೀತಿ ಸಿದ್ಧಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದ್ದು, ಇದು ಅಂತಿಮ ರೂಪ ಪಡೆಯುತ್ತಿದೆ. ಸದ್ಯದಲ್ಲೇ ಇದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದು" ಎಂದು ಸಾರ್ಸ್-ಕೋವ್-2 ವಂಶವಾಹಿ ರೂಪಾಂತರಗಳ ಮೇಲೆ ನಿಗಾ ಇರಿಸುವ ಸಲುವಾಗಿ ರಚಿಸಲಾಗಿರುವ 28 ಪ್ರಯೋಗಾಲಯಗಳ ಒಕ್ಕೂಟ ಐಎನ್‌ಎಸ್‌ಎಸಿಓಜಿ ಸಹ- ಅಧ್ಯಕ್ಷ ಡಾ.ಎನ್.ಕೆ.ಅರೋರಾ ಹೇಳಿದ್ದಾರೆ.
ದಿಲ್ಲಿಯಲ್ಲಿ ನಡೆದ ಟೈಮ್ಸ್‌ನೌ ಶೃಂಗದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ, ಬೂಸ್ಟರ್ ಶಾಟ್‌ಗಳ ಅಗತ್ಯತೆ ಬಗ್ಗೆ ಚರ್ಚೆ ಸಹಜವಾಗಿಯೇ ನಡೆಯುತ್ತಿದೆ. ಆದರೆ ಸರಕಾರ ತಜ್ಞರ ಅಭಿಪ್ರಾಯದ ಆಧಾರದಲ್ಲಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದ್ದರು.
"ನಮ್ಮ ಮುಖ್ಯವಾದ ಉದ್ದೇಶ ಮೊದಲ ಹಾಗೂ ಎರಡನೇ ಡೋಸ್ ಅನ್ನು ಎಲ್ಲ ಅರ್ಹ ಜನ ಸಮುದಾಯಕ್ಕೆ ನೀಡುವುದು. ಬೂಸ್ಟರ್ ಡೋಸ್ ವಿಚಾರದಲ್ಲಿ ಸರಕಾರ ನೇರ ನಿರ್ಧಾರವನ್ನು ಕೈಗೊಳ್ಳುತ್ತದೆ ಎನಿಸುವುದಿಲ್ಲ. ಐಸಿಎಂಆರ್ ಮತ್ತು ತಜ್ಞರ ತಂಡಗಳು ಮಾಡುವ ಶಿಫಾರಸಿನ ಮೇಲೆ ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದರು. ದೇಶದಲ್ಲಿ ಸಾಕಷ್ಟು ಡೋಸ್‌ಗಳು ಲಭ್ಯವಿದ್ದು, ಭವಿಷ್ಯದ ಯಾವುದೇ ಅಗತ್ಯತೆಗಳನ್ನು ಪೂರೈಸಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.
ಬೂಸ್ಟರ್ ಡೋಸ್ ಕುರಿತ ನೀತಿ 10 ದಿನಗಳಲ್ಲಿ ಪ್ರಕಟವಾಗುವ ನಿರೀಕ್ಷೆ ಇದ್ದು, ಮೂರನೇ ಡೋಸ್ ನೀಡಿಕೆ ಆರಂಭಿಸುವ ಬಗ್ಗೆ ಮತ್ತು ಮೊದಲು ಇದನ್ನು ಯಾರು ಪಡೆಯಲು ಅರ್ಹರು ಎಂಬ ಬಗ್ಗೆ ಸರಕಾರದ ಯೋಜನೆಗಳನ್ನು ಇದು ಬಹಿರಂಗಪಡಿಸಲಿದೆ. ದೇಶದಲ್ಲಿ ಪ್ರತಿ ತಿಂಗಳು 30- 35 ಕೋಟಿ ಲಸಿಕಾ ಡೋಸ್‌ಗಳು ಉತ್ಪಾದನೆಯಾಗುತ್ತಿವೆ. ಲಸಿಕೆಯ ಕೊರತೆ ದೇಶದಲ್ಲಿ ಇಲ್ಲ ಎಂದು ಅರೋರಾ ತಿಳಿಸಿದ್ದಾರೆ.