ಭಾರತದ ಜತೆ ಉತ್ತಮ ರಾಜತಾಂತ್ರಿಕ ಸಂಬಂಧ: ತಾಲಿಬಾನ್ ಬಯಕೆ
ತಾಲಿಬಾನ್ ವಕ್ತಾರ ಝೈಬುಲ್ಲಾ ಮುಜಾಹಿದ್ (Photo source: PTI)
ಹೊಸದಿಲ್ಲಿ, ನ.12: ಭಾರತ ಈ ಪ್ರದೇಶದ ಪ್ರಮುಖ ದೇಶವಾಗಿದ್ದು, ಭಾರತ ಸರ್ಕಾರದ ಜತೆ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಹೊಂದಲು ಅಫ್ಘಾನಿಸ್ತಾನ ಬಯಸುತ್ತದೆ ಎಂದು ತಾಲಿಬಾನ್ ಪ್ರಕಟಿಸಿದೆ.
ಭಾರತದ ಅಫ್ಘಾನಿಸ್ತಾನ ಸಮ್ಮೇಳನದ ಬಳಿಕ ತಾಲಿಬಾನ್ ವಕ್ತಾರ ಝೈಬುಲ್ಲಾ ಮುಜಾಹಿದ್ ಈ ಹೇಳಿಕೆ ನೀಡಿದ್ದಾರೆ. "ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನದ ನೀತಿಯ ಪ್ರಕಾರ, ಅಫ್ಘಾನ್ ನೆಲವನ್ನು ಯಾವುದೇ ದೇಶದ ವಿರುದ್ಧ ಬಳಸಲು ಅವಕಾಶವಿಲ್ಲ ಹಾಗೂ ಪರಸ್ಪರ ಸಹಕಾರವನ್ನು ತಾಲಿಬಾನ್ ಬಯಸುತ್ತದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಈ ಸಮ್ಮೇಳನದಲ್ಲಿ ನಾವು ಭಾಗವಹಿಸದಿದ್ದರೂ, ಈ ಸಮ್ಮೇಳನ, ಅಫ್ಘಾನಿಸ್ತಾನದ ಪ್ರಸಕ್ತ ಸ್ಥಿತಿಯನ್ನು ಪರಿಗಣಿಸಿ ಅಫ್ಘಾನಿಸ್ತಾನದ ಹಾಗೂ ಇಡೀ ಪ್ರದೇಶದ ಉತ್ತಮ ಹಿತಾಸಕ್ತಿಯಿಂದ ಆಯೋಜಿಸಿದ ಸಮ್ಮೇಳನ ಎನ್ನುವುದು ನಮ್ಮ ದೃಢವಾದ ನಂಬಿಕೆ. ಇದರಲ್ಲಿ ಭಾಗವಹಿಸಿದ ದೇಶಗಳು ಕೂಡಾ ಅಫ್ಘಾನಿಸ್ತಾದ ಭದ್ರತಾ ಸ್ಥಿತಿಯನ್ನು ಸುಧಾರಿಸುವಲ್ಲಿ ಮತ್ತು ರಕ್ಷಿಸುವ ಯೋಚನೆ ಹೊಂದಿವೆ ಮತ್ತು ಪ್ರಸಕ್ತ ಸರ್ಕಾರ ದೇಶದಲ್ಲಿ ಸ್ವಂತವಾಗಿ ಭದ್ರತೆ ಒದಗಿಸುವಲ್ಲಿ ನಮಗೆ ನೆರವಾಗುತ್ತವೆ ಎಂಬ ನಂಬಿಕೆ ನಮ್ಮದು" ಎಂದು ಹೇಳಿದ್ದಾರೆ.
ಭಾರತದ ಸಮ್ಮೇಳನ ಬಗ್ಗೆ ತಾಲಿಬಾನ್ ಯಾವ ಆತಂಕವನ್ನೂ ಹೊಂದಿಲ್ಲ. ಇದರ ಫಲಿತಾಂಶವನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ಅನುಷ್ಠಾನಗೊಳಿಸಲಾಗುತ್ತದೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.
ಈ ಸಮ್ಮೇಳನದ ಬಳಿಕ, ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ಮುಂದುವರಿಸಲು ತಾನು ಬದ್ಧ ಎಂದು ಭಾರತ ಸ್ಪಷ್ಟಪಡಿಸಿದೆ. ಆದರೆ ದೇಶಕ್ಕೆ ಸುಲಲಿತವಾಗಿ ಪರಿಹಾರ ಸಾಮಗ್ರಿಗಳನ್ನು ಪೂರೈಸಲು ಕಷ್ಟಕರವಾದ ಪರಿಸ್ಥಿತಿ ಇದೆ ಎಂದು ಭಾರತ ಅಭಿಪ್ರಾಯಪಟ್ಟಿದೆ. ರಸ್ತೆ ಮೂಲಕ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಸಾಗಿಸಲು ಭಾರತ ಇನ್ನೂ ಪಾಕಿಸ್ತಾನದ ಅನುಮೋದನೆಗೆ ಕಾಯುತ್ತಿದೆ ಎಂದು ಹೇಳಿದೆ.