ರಾಷ್ಟ್ರೀಯ ಭದ್ರತೆ ಕ್ಷಮಿಸಲಾಗದಷ್ಟು ರಾಜಿಯಾಗಿದೆ, 56 ಇಂಚಿನ ಎದೆ ಹೆದರುತ್ತಿದೆ: ರಾಹುಲ್ ಗಾಂಧಿ

ಹೊಸದಿಲ್ಲಿ: ಚೀನಾದ ವಿರುದ್ಧ ಕೇಂದ್ರ ಸರಕಾರವು ಯಾವುದೇ ತಂತ್ರವನ್ನು ಹೊಂದಿಲ್ಲದ ಕಾರಣ ದೇಶದ ರಾಷ್ಟ್ರೀಯ ಭದ್ರತೆಯು 'ಕ್ಷಮಿಸಲಾಗದಷ್ಟು ರಾಜಿಯಾಗಿದೆ. 56 ಇಂಚಿನ ಎದೆ ಹೆದರುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ವಿದೇಶಾಂಗ ಸಚಿವಾಲಯ ಹಾಗೂ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರು ಚೀನಾ ಗಡಿ ಸಮಸ್ಯೆಯ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆಂಬ ವರದಿಯನ್ನು ಉಲ್ಲೇಖಿಸಿ ರಾಹುಲ್ ಹೇಳಿದ್ದಾರೆ.
" ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ಗಡಿಯನ್ನು ಕಾವಲು ಕಾಯುತ್ತಿರುವ ಸೈನಿಕರ ಬಗ್ಗೆ ನಾನು ಯೋಚಿಸುತ್ತಿರುವೆ. ಆದರೆ ಭಾರತ ಸರಕಾರವು ಸುಳ್ಳನ್ನು ಹೊರಹಾಕುತ್ತದೆ" ಎಂದು ರಾಹುಲ್ ಅವರು ಆರೋಪಿಸಿದರು.
2014 ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶವನ್ನು ಗುಜರಾತ್ ಆಗಿ ಪರಿವರ್ತಿಸಲು 56 ಇಂಚಿನ ಎದೆಯ ಅಗತ್ಯವಿದೆ ಎಂದು ಹೇಳಿದ್ದರು.
ಚೀನೀಯರು ಭಾರತದ ಭೂಪ್ರದೇಶಕ್ಕೆ ಬಂದು ಹೊಸ ಗ್ರಾಮವನ್ನು ನಿರ್ಮಿಸುತ್ತಾರೆ ಎಂಬ ವಿಚಾರವು ಸತ್ಯವಲ್ಲ ಮತ್ತು ಹಳ್ಳಿಗಳು ವಾಸ್ತವಿಕ ನಿಯಂತ್ರಣ ರೇಖೆಯ ಚೀನಾದ ಬದಿಯಲ್ಲಿವೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಗುರುವಾರ ಹೇಳಿದ್ದಾರೆ.
ತನ್ನ ಇತ್ತೀಚಿನ ವರದಿಯಲ್ಲಿ ಅಮೆರಿಕ ರಕ್ಷಣಾ ಇಲಾಖೆ ಚೀನಾ ತನ್ನ ಟಿಬೆಟ್ ಸ್ವಾಯತ್ತ ಪ್ರದೇಶ ಹಾಗೂ ಭಾರತದ ಅರುಣಾಚಲ ಪ್ರದೇಶದ ನಡುವಿನ ವಿವಾದಿತ ಪ್ರದೇಶದೊಳಗೆ ದೊಡ್ಡ ಗ್ರಾಮವನ್ನು ಎಲ್ ಎಸಿಯ ನ ಪೂರ್ವ ವಲಯದಲ್ಲಿ ನಿರ್ಮಿಸಿದೆ ಎಂದು ಹೇಳಿದೆ.







