ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವರ್ಗಾವಣೆ ವಿರೋಧಿಸಿ 237 ವಕೀಲರಿಂದ ಸಿಜೆಐ ಗೆ ಪತ್ರ

ಹೊಸದಿಲ್ಲಿ: ಮದ್ರಾಸ್ ಹೈಕೋರ್ಟ್‍ನ 237 ವಕೀಲರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಹಾಗೂ ಕೊಲೀಜಿಯಂಗೆ ಪತ್ರ ಬರೆದು ಜಸ್ಟಿಸ್ ಸಂಜಿಬ್ ಬ್ಯಾನರ್ಜಿ ಅವರ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಜಸ್ಟಿಸ್ ಬ್ಯಾನರ್ಜಿ ಅವರನ್ನು ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ವರ್ಗಾವಣೆ ಮಾಡಲು ಕೊಲೀಜಿಯಂ ಶಿಫಾರಸು ಮಾಡಿತ್ತು.
ಜಸ್ಟಿಸ್ ಬ್ಯಾನರ್ಜಿ ಅವರ ನಂತರದ ಇಬ್ಬರು ಹಿರಿಯ ನ್ಯಾಯಾಧೀಶರುಗಳಲ್ಲಿ ಒಬ್ಬರನ್ನು ಇತ್ತೀಚೆಗೆ ಸುಪ್ರೀಂ ಕೋರ್ಟಿಗೆ ವರ್ಗಾಯಿಸಿ ಭಡ್ತಿ ನೀಡಲಾಗಿದ್ದರೆ ಇನ್ನೊಬ್ಬರನ್ನು ಕೊಲ್ಕತ್ತಾ ಹೈಕೋರ್ಟಿಗೆ ವರ್ಗಾಯಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆಯಲ್ಲದೆ ಜಸ್ಟಿಸ್ ಬ್ಯಾನರ್ಜಿ ಅವರಂತಹ ಸಮರ್ಥ ಮುಖ್ಯ ನ್ಯಾಯಮೂರ್ತಿಗಳ ಸೇವೆ ತಿಂಗಳಿಗೆ ಕೇವಲ 70-75 ಪ್ರಕರಣಗಳನ್ನು ಪಡೆಯುವ ಮೇಘಾಲಯ ಹೈಕೋರ್ಟಿಗೆ ಅಗತ್ಯವಿದೆಯೇ ಎಂದು ಪತ್ರ ಪ್ರಶ್ನಿಸಿದೆ. ಮದ್ರಾಸ್ ಹೈಕೋರ್ಟ್ ವರ್ಷಕ್ಕೆ 35,000 ರಷ್ಟು ಪ್ರಕರಣಗಳನ್ನು ಪಡೆಯುತ್ತಿದೆ ಎಂದು ಪತ್ರ ವಿವರಿಸಿದೆ.
ವರ್ಗಾವಣೆಗೆ ಕೊಲೀಜಿಯಂ ಕಾರಣ ನೀಡುವುದಿಲ್ಲವಾದ ಕಾರಣ ಒಬ್ಬ ನಿರ್ದಿಷ್ಟ ನ್ಯಾಯಾಧೀಶರನ್ನು ಏಕೆ ವರ್ಗಾಯಿಸಲಾಗಿದೆ ಎಂಬ ಕುರಿತು ಊಹಾಪೋಹಗಳಿಗೆ ಕಾರಣವಾಗುತ್ತದೆ ಹಾಗೂ ಒಬ್ಬ ಪ್ರಾಮಾಣಿಕ ನ್ಯಾಯಾಧೀಶರ ಖ್ಯಾತಿಗೆ ಇದು ಧಕ್ಕೆ ತರುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಜಸ್ಟಿಸ್ ಬ್ಯಾನರ್ಜಿ ಅವರು ತಮ್ಮ ನೇರ ನಡೆನುಡಿಗಳಿಗೆ ಖ್ಯಾತರಾದವರಲ್ಲದೆ ಅವರ ಕೆಲವೊಂದು ತೀರ್ಪುಗಳು ಮಹತ್ವವನ್ನು ಪಡೆಯುವುದರ ಜತೆಗೆ ಕೆಲವು ವಿವಾದಕ್ಕೂ ಈಡಾಗಿದೆ. ಮೇಲಾಗಿ ಯಾವುದೇ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಸರಕಾರಿ ಏಜನ್ಸಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಅವರು ಹಿಂಜರಿಯುತ್ತಿರಲಿಲ್ಲ.