ಪ್ರವಾಹ ಭೀತಿಯಿಂದ ಕಾರುಗಳನ್ನು ಫ್ಲೈಓವರುಗಳಲ್ಲಿ ಪಾರ್ಕ್ ಮಾಡುತ್ತಿರುವ ಚೆನ್ನೈ ನಿವಾಸಿಗಳು

ಚೆನ್ನೈ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಚೆನ್ನೈ ನಿವಾಸಿಗಳು ಕಂಗಾಲಾಗಿದ್ದಾರೆ. ಮತ್ತೆ 2015ರ ಮಹಾನೆರೆಯ ಸ್ಥಿತಿ ಉದ್ಭವವಾಗಲಿದೆಯೇ ಎಂಬ ಆತಂಕ ಕಾಡುತ್ತಿರುವ ನಡುವೆಯೇ ಮನೆಯ ಸುತ್ತಲಿನ ರಸ್ತೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಕಳೆದ ಬಾರಿಯಂತೆಯೇ ಈ ಬಾರಿಯೂ ಪ್ರವಾಹ ಗಂಭೀರ ಸ್ಥಿತಿ ತಲುಪಿದರೆ ತಮ್ಮ ವಾಹನಗಳು ಹಾನಿಗೀಡಾಗಬಹುದೆಂಬ ಭಯದಿಂದ ಹಲವರು ಫ್ಲೈಓವರುಗಳಲ್ಲಿ ಹಾಗೂ ಎತ್ತರದ ಪ್ರದೇಶಗಳಲ್ಲಿ ತಮ್ಮ ಕಾರುಗಳನ್ನು ಪಾರ್ಕ್ ಮಾಡುತ್ತಿದ್ದಾರೆ.
ಗುರುವಾರ ನಗರದ ವೆಲಚ್ಚೇರಿ ಮತ್ತು ಪಳ್ಳಿಕರಣೈ ಫ್ಲೈಓವರುಗಳಲ್ಲಿ 15ಕ್ಕೂ ಅಧಿಕ ಕಾರುಗಳನ್ನು ಪಾರ್ಕ್ ಮಾಡಲಾಗಿತ್ತಲ್ಲದೆ ಇನ್ನೂ ಹಲವಾರು ನಿವಾಸಿಗಳು ತಮ್ಮ ಕಾರುಗಳನ್ನು ಫ್ಲೈಓವರುಗಳಲ್ಲಿ ಪಾರ್ಕ್ ಮಾಡಲು ಮುಂದಾಗಿದ್ದಾರೆ.
ಪ್ರಮುಖವಾಗಿ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ತಮ್ಮ ಬೆಲೆಬಾಳುವ ಕಾರುಗಳನ್ನು ಮತ್ತೆ ಕಳೆದುಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಕಳೆದ ಬಾರಿ ಕಾರುಗಳಿಗೆ ನೀರು ನುಗ್ಗಿ ಅವುಗಳು ನಿಷ್ಪ್ರಯೋಜಕವಾಗಿ ಹಲವರು ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆಯನ್ನೂ ಎದುರಿಸಿದ್ದರು.
ಪೂಂಡಿ ಜಲಾಶಯದಿಂದ ಬುಧವಾರ ಸುಮಾರು 5,000 ಕ್ಯೂಸೆಕ್ಸ್‍ನಷ್ಟು ನೀರನ್ನು ಹೊರಬಿಟ್ಟ ಕಾರಣ ನಗರದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು.