ಬಿಟ್ ಕಾಯಿನ್ ಹಗರಣ; ಸುಪ್ರೀಂ ಕೋರ್ಟ್‍ನಲ್ಲಿ ನಾವೇ ಪಿಐಎಲ್ ದಾಖಲಿಸ್ತೀವಿ: ಪ್ರಿಯಾಂಕ್ ಖರ್ಗೆ
''ಪ್ರಕರಣದಲ್ಲಿ ಪೊಲೀಸರು, ಸರಕಾರ ಎಲ್ಲರೂ ಇದ್ದಾರೆ''

ಬೆಂಗಳೂರು, ನ. 12: `ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್‍ನವರು ಇದ್ದರೆ ಕೂಡಲೇ ಕೇಸು ದಾಖಲು ಮಾಡಲಿ. ಅದು ಬಿಟ್ಟು ನಾವೂ ಇದ್ದೇವೆ, ನೀವೂ ಇದ್ದೀರಿ. ಹೀಗಾಗಿ ಇಲ್ಲೇ ಇತ್ಯರ್ಥ ಮಾಡಿಕೊಳ್ಳೊಣ ಎಂಬ ಮನೋಭಾವ ಸರಿಯಲ್ಲ. ಬಿಟ್ ಕಾಯಿನ್ ಹಗರಣದ ಬಗ್ಗೆ ಪಾರದರ್ಶಕ ತನಿಖೆಗೆ ಆಗ್ರಹಿಸಿದರೆ ನನ್ನ ವಿರುದ್ಧ ಬಿಜೆಪಿ ಮುಖಂಡರು ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, `ಪ್ರಕರಣದಲ್ಲಿ ಕಾಂಗ್ರೆಸಿಗರಿದ್ದರೆ ಕೂಡಲೇ ಅವರಿಗೆ ವಿರುದ್ಧ ಮೊಕದ್ದಮೆ ದಾಖಲಿಸಬೇಕಿತ್ತು. ಇದೊಂದು ರಾಷ್ಟ್ರಮಟ್ಟದ ಬಹಳ ದೊಡ್ಡ ಹಗರಣ. 2020ರ ನವೆಂಬರ್ 14ಕ್ಕೆ ಶ್ರೀಕಿ, ರಾಬಿನ್ ಖಂಡೆವಾಲಾ ಮೌರ್ಯ ಹೊಟೇಲ್‍ನಲ್ಲಿ ಶರಣಾಗಿದ್ದಾರೆ. ಇದರ ಬಗ್ಗೆ ಯಾವುದೇ ತನಿಖೆ ಮಾಡುವುದಿಲ್ಲ. 14 ದಿನ ವಶಕ್ಕೆ ಪಡೆದಿದ್ದರು. ಈ ಸಂಬಂಧ ಶ್ರೀಧರ ಪೂಜಾರಿ ಎಂಬವರು ದೂರು ನೀಡುತ್ತಾರೆ.
ಆ ಬಳಿಕ ಡಿ.2ರಂದು ಶ್ರೀಕಿಯನ್ನು ಸಿಸಿಬಿಯವರು 12 ದಿನಗಳ ಕಾಲ ಕಸ್ಟಡಿಗೆ ಪಡೆಯುತ್ತಾರೆ. ಕ್ಯಾಸಿನೋ 143 ಗೇಮಿಂಗ್‍ನವರು ದೂರು ನೀಡಿದ್ದು, ಹ್ಯಾಕ್ ಮಾಡಿ ಅಕ್ರಮ ಹಣ ಗಳಿಸಿದ್ದಾರೆಂದು ದೂರು ನೀಡಿದ್ದಾರೆ. ಶ್ರೀಕಿ ಅವರ ಬಳಿ ಇದ್ದ 31 ಬಿಟ್ ಕಾಯಿನ್ ಸಿಕ್ಕಿವೆ ಎಂದು ಪಂಚನಾಮೆ ಮಾಡಲಾಗಿದೆ. ಆದರೆ, ಇದೀಗ ಯಾವುದೇ ಸಾಕ್ಷಾಧ್ಯಾರಗಳಿಲ್ಲ ಎಂದು ಹೇಳಲಾಗುತ್ತಿದೆ. ಇದೆಲ್ಲವನ್ನು ನೋಡಿದರೆ ಇಡೀ ಪ್ರಕರಣ ಹಾಸ್ಯಾಸ್ಪದವಾಗಿ ಕಾಣುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ದೂರಿದರು.
ಫೆಬ್ರವರಿ 15ಕ್ಕೆ ಜಾರಿ ನಿರ್ದೇಶನಾಲಯ(ಈಡಿ)ದಿಂದ ಬಿಟ್ ಕಾಯಿನ್ ಬಗ್ಗೆ ಮಾಹಿತಿ ನೀಡುವಂತೆ ಪತ್ರ ಬಂದಿದೆ. ಅದಕ್ಕೆ ಇಲ್ಲಿಂದ ಮಾರ್ಚ್ 3ಕ್ಕೆ ಉತ್ತರ ನೀಡಲಾಗಿದೆ. ಇಷ್ಟೊಂದು ದಿನ ವಿಳಂಬವೇಕೇ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ನಗರ ಪೊಲೀಸ್ ಆಯುಕ್ತರು ಬಿಟ್ ಕಾಯಿನ್ ಪ್ರಕರಣ ಸಂಬಂಧ ಇಂಟರ್ ಫೇಲ್‍ಗೆ ಮನವಿ ಮಾಡಿ ತನಿಖೆಗೆ ಸಹಕಾರ ನೀಡುವಂತೆ ಕೋರುತ್ತಾರೆ. ಯೂನೋ ಕಾಯಿನ್‍ನಡಿ ವ್ಯವಹಾರ ನಡೆಸಿದ್ದರೂ, ಶ್ರೀಕಿ ಪೊಲೀಸ್ ವಶದಲ್ಲಿರುವ ವೇಳೆ ಆತನಿಗೆ ಮಾದಕ ವಸ್ತುಗಳನ್ನು ನೀಡಿದ್ದು ಯಾರು? ಈ ಬಗ್ಗೆ ಸಚಿವರೇ ಸ್ಪಷ್ಟಣೆ ನೀಡಬೇಕು ಎಂದು ಆಗ್ರಹಿಸಿದರು.
ಪಿಐಎಲ್ ದಾಖಲು: ಈ ಪ್ರಕರಣದ ಬಗ್ಗೆ ನಾವೇ ಸುಪ್ರೀಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಹಾಕುತ್ತೇವೆ. ಈ ಬಗ್ಗೆ ಇನ್ನಷ್ಟು ದಾಖಲೆ ಸಂಗ್ರಹಿಸುತ್ತೇವೆ. ಈ ಸರಕಾರದಿಂದ ಪ್ರಕರಣದ ಬಗ್ಗೆ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಏಕೆಂದರೆ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದಾರೆ. ಸರಕಾರ ಪೊಲೀಸರು ಭಾಗಿಯಾಗಿದ್ದು ಸತ್ಯ ಹೊರಬರಲು ಸಾಧ್ಯವೇ ಇಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿದರೆ ಸತ್ಯ ಬೆಳಕಿಗೆ ಬರಲಿದೆ ಎಂದು ಪ್ರಿಯಾಂಕ ಖರ್ಗೆ ಆಗ್ರಹಿಸಿದರು.
ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ (ಸಿಎಂ) ಯಾರು ಬೇಕಾದರೂ ಆಗಲಿ, ನಾನು ಯಾರ ಹೆಸರನ್ನೂ ಇಲ್ಲಿ ಹೇಳುವುದಿಲ್ಲ. ಮಾಜಿ ಗೃಹ ಸಚಿವರು, ಹಾಲಿ ಸಿಎಂ ಸರ್ವಜ್ಞರಿದ್ದಂತೆ. ಅವರು ಇದರ ಬಗ್ಗೆ ನಿಜಾಂಶ ಏನು ಎಂದು ಹೇಳಲಿ ಬಿಡಿಲಿ. ನಾವು ಎತ್ತಿರುವ ಪ್ರಶ್ನೆಗಳಿಗೆ ಸರಕಾರ ದಾಖಲೆ ಸಮೇತ ಉತ್ತರ ನೀಡಬೇಕು. ಅದು ಬಿಟ್ಟು ನಮ್ಮ ಬಾಯಿ ಮುಚ್ಚಿಸಲು ಪ್ರಯತ್ನ ನಡೆಸುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ಷೇಪಿಸಿದರು.
`ಪೊಲೀಸರ ವಶದಲ್ಲಿದ್ದ ವೇಳೆ ತನಗೆ ಡ್ರಗ್ಸ್(ಮಾದಕ ದ್ರವ್ಯ) ನೀಡಲಾಗಿತ್ತು ಎಂದು ಶ್ರೀಕಿ ನ್ಯಾಯಾಲಯದಲ್ಲಿ ತಿಳಿಸಿದ್ದಾನೆ. ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿಲ್ಲ. ಈ ಪ್ರಕರಣದ ಬಗ್ಗೆ ಈಡಿಗೆ ಮಾಹಿತಿ ನೀಡಲು ಪೊಲೀಸರು ವಿಳಂಬ ಮಾಡಿದ್ದು, ಮೇಲುನೋಟಕ್ಕೆ ಇವೆಲ್ಲವೂ ಅಕ್ರಮ ನಡೆದಿದೆ ಎಂಬುದಕ್ಕೆ ಪುಷ್ಟಿ ನೀಡುತ್ತಿವೆ. ಹೀಗಾಗಿ ಪ್ರಕರಣದಲ್ಲಿ ಸತ್ಯಾಂಶ ಹೊರ ಬರಬೇಕಾದರೆ ಸುಪ್ರೀಂ ಕೋರ್ಟ್‍ನ ಹಾಲಿ ನ್ಯಾಯಾಧೀಶರಿಂದಲೇ ತನಿಖೆ ನಡೆಸಬೇಕು'
-ಪ್ರಿಯಾಂಕ್ ಖರ್ಗೆ ಮಾಜಿ ಸಚಿವ







