ಮಾಣಿ: ಇತ್ತಂಡಗಳ ಮಾತಿನ ಚಕಮಕಿಗೆ ಕಾರಣವಾದ ವಾಹನ ಅಪಘಾತ
ಲಾಠಿ ಬೀಸಿದ ಪೊಲೀಸರು

ಬಂಟ್ವಾಳ, ನ.12: ಮಾಣಿಯಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ ವಿಚಾರವಾಗಿ ಇತ್ತಂಡದ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಸ್ಥಳದಲ್ಲಿ ವಿಟ್ಲ ಪೊಲೀಸರು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಲ್ಲಿ ಈ ಘಟನೆ ಸಂಭವಿಸಿದೆ. ಕಲ್ಲಡ್ಕ ಕಡೆಯಿಂದ ಮಾಣಿ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಮತ್ತು ಕಲ್ಲಡ್ಕ ಕಡೆಗೆ ತೆರಳುತ್ತಿದ್ದ ಶಿಪ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಘಟನೆ ಬಗ್ಗೆ ಎರಡು ಕಾರಿಗೆ ಸಂಬಂಧಪಟ್ಟವರ ನಡುವೆ ವಾದವಿವಾದ ನಡೆದು ಮಾತಿನ ಚಕಮಕಿ ನಡೆದಿದೆ. ಬಳಿಕ ಇತ್ತಂಡದವರು ಪರಸ್ಪರ ಹಲ್ಲೆಗೆ ಮುಂದಾಗಿದ್ದರು ಎಂದು ಪ್ರತ್ಯಕ್ಷಿ ದರ್ಶಿಗಳು ತಿಳಿಸಿದ್ದಾರೆ.
ಘಟನೆ ತಾರಕಕ್ಕೇರುತ್ತಿದ್ದಂತೆ ಇತ್ತಂಡದ ಜನರು ಜಮಾಯಿಸಿ, ಉದ್ವಿಗ್ನದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಸ್ಥಳದಲ್ಲಿ ನೂರಕ್ಕಿಂತಲೂ ಅಧಿಕ ಮಂದಿ ಜಮಾಯಿಸಿದರು.
ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ವಿಟ್ಲ ಪೊಲೀಸರು ನಿಯಂತ್ರಿಸಲು ಲಾಠಿ ಬೀಸಿದರು. ಬಳಿಕ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ.





