ಅತ್ಯಾಚಾರ ಪ್ರಕರಣ:ಉತ್ತರಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿಗೆ ಜೀವಾವಧಿ ಶಿಕ್ಷೆ

ಲಕ್ನೊ: ಚಿತ್ರಕೂಟ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಹಾಗೂ ಇತರ ಇಬ್ಬರಿಗೆ ಲಕ್ನೋ ವಿಶೇಷ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು India Today ವರದಿ ಮಾಡಿದೆ.
ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪ್ರಜಾಪತಿಗೆ ಬುಧವಾರ ಶಿಕ್ಷೆ ವಿಧಿಸಲಾಗಿತ್ತು. ನ್ಯಾಯಾಲಯ ಪ್ರಜಾಪತಿಗೆ 2 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.
ವಿಶೇಷ ನ್ಯಾಯಾಧೀಶ ಪಿಕೆ ರೈ ಅವರು ಪ್ರಜಾಪತಿ ಹಾಗೂ ಇತರ ಇಬ್ಬರನ್ನು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಅಪ್ರಾಪ್ತ ಮಗಳ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದರು. ಪ್ರಾಸಿಕ್ಯೂಷನ್ ಮೂವರ ವಿರುದ್ಧದ ಆರೋಪಗಳನ್ನು ಸಮಂಜಸವಾಗಿ ಸಾಬೀತುಪಡಿಸಲು ಸಮರ್ಥವಾಗಿದೆ ಎಂದು ಹೇಳಿದರು.
ಅಖಿಲೇಶ್ ಯಾದವ್ ಅವರ ಸರಕಾರದ ಸಂಪುಟದಲ್ಲಿ ಸಾರಿಗೆ ಮತ್ತು ಗಣಿಗಾರಿಕೆ ಸಚಿವಾಲಯಗಳ ಖಾತೆಗಳನ್ನು ಹೊಂದಿದ್ದ ಪ್ರಜಾಪತಿಯನ್ನು ಮಾರ್ಚ್ 2017 ರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಆಕೆಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಯಿತು.
ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ಸಚಿವರ ವಿರುದ್ಧ ಎಫ್‌ಐಆರ್ ಅನ್ನು ಗೌತಂಪಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಫೆಬ್ರವರಿ 18, 2017 ರಂದು ಎಫ್‌ಐಆರ್ ದಾಖಲಾದ ನಂತರ ಸಚಿವರನ್ನು ಮಾರ್ಚ್‌ನಲ್ಲಿ ಬಂಧಿಸಲಾಯಿತು. ಅಂದಿನಿಂದ ಜೈಲಿನಲ್ಲಿದ್ದರು.
ಅಕ್ಟೋಬರ್ 2014 ರಿಂದ ಸಚಿವರು ಹಾಗೂ ಅವರ ಸಹಚರರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಆರೋಪಿಗಳು ಜುಲೈ 2016 ರಲ್ಲಿ ತನ್ನ ಅಪ್ರಾಪ್ತ ಮಗಳಿಗೆ ಕಿರುಕುಳ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ ನಂತರ ಅವರ ವಿರುದ್ಧ ದೂರು ನೀಡಲು ನಿರ್ಧರಿಸಿದರು.
ಪ್ರಜಾಪತಿ ಜೊತೆಗೆ ಶಿಕ್ಷೆಗೆ ಗುರಿಯಾದ ಇನ್ನಿಬ್ಬರೆಂದರೆ ಆಶಿಶ್ ಶುಕ್ಲಾ ಮತ್ತು ಅಶೋಕ್ ತಿವಾರಿ. ಶುಕ್ಲಾ ಅಮೇಥಿಯಲ್ಲಿ ಮಾಜಿ ಕಂದಾಯ ಗುಮಾಸ್ತನಾಗಿದ್ದರೆ, ತಿವಾರಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ.