ಪಿಐಎಲ್ ಸಲ್ಲಿಸುವಾಗ ನಿಯಮ ಪಾಲನೆ ಕಡ್ಡಾಯ: ಹೈಕೋರ್ಟ್

ಬೆಂಗಳೂರು, ನ.12: ನಿಯಮಗಳನ್ನು ಪಾಲಿಸದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ. ಪಿಐಎಲ್ ಸಲ್ಲಿಸುವಾಗ ನಿಯಮ ಪಾಲನೆ ಕಡ್ಡಾಯ ಎಂದು ತಿಳಿಸಿದೆ.
ಕೃಷ್ಣ ಜಲಭಾಗ್ಯ ನಿಗಮ ಕರೆದಿದ್ದ ಟೆಂಡರ್ ಪ್ರಶ್ನಿಸಿ ರಾಯಚೂರಿನ ಬಸವರಾಜ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿದೆ.
ಅರ್ಜಿಯಲ್ಲಿ ಕೃಷ್ಣ ಜಲಭಾಗ್ಯ ನಿಗಮವು ಕರೆದಿರುವ ಟೆಂಡರ್ ನಲ್ಲಿ ಗುತ್ತಿಗೆ ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸಲಾಗಿದೆ. ಆದರೆ, ಗುತ್ತಿಗೆ ನಿಯಮಗಳನ್ನು ಪಾಲಿಸಲಾಗಿದೆ ಎಂದು ಸರಕಾರದ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆಗೆ ಯೋಗ್ಯವಾಗಿಲ್ಲ. ಪಿಐಎಲ್ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಪೀಠ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
ಅಲ್ಲದೇ, ಮುಂದಿನ ದಿನಗಳಲ್ಲಿ ಹೈಕೋರ್ಟ್‍ಗೆ ಪಿಐಎಲ್ ಸಲ್ಲಿಸುವಾಗ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಪಾಲನೆ ಮಾಡದಿದ್ದರೆ, ಅಂತಹ ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಬಾರದು ಎಂದು ಪೀಠ ರಿಜಿಸ್ಟ್ರಾರ್‍ಗೆ ನಿರ್ದೇಶಿಸಿತು.





