ಕಾಸ್ಗಂಜ್ ಕಸ್ಟಡಿ ಸಾವು:ಮುಖ್ಯ ಕಾರ್ಯದರ್ಶಿ,ಡಿಜಿಪಿ ಅವರಿಂದ ವರದಿ ಕೇಳಿದ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ

ಇಕ್ಬಾಲ್ ಸಿಂಗ್ ಲಾಲ್ಪುರ, Photo: Twitter
ಹೊಸದಿಲ್ಲಿ: ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿಯೊಬ್ಬನ ಸಾವಿನ ಪ್ರಕರಣವನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು(ಎನ್ ಸಿಎಂ) ಸ್ವಯಂ ಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡಿದೆ ಹಾಗೂ ಪ್ರಕರಣದ ಕುರಿತಾಗಿ ತೆಗೆದುಕೊಂಡ ಕ್ರಮದ ಕುರಿತು ಪೊಲೀಸ್ ಮಹಾನಿರ್ದೇಶಕರು ಹಾಗೂ ಮುಖ್ಯ ಕಾರ್ಯದರ್ಶಿಯಿಂದ 15 ದಿನಗಳಲ್ಲಿ ವರದಿಯನ್ನು ಕೇಳಿದೆ.
ತ್ರಿಪುರಾದಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಮಸೀದಿ, ಮನೆ ಹಾಗೂ ಅಂಗಡಿಗಳ ಮೇಲೆ ನಡೆದಿರುವ ದಾಳಿಯ ಬಗ್ಗೆ ಆಯೋಗವು ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡಿದ್ದು ಅದರ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯಿಂದ ವರದಿ ಕೇಳಿದೆ.
ಎನ್ಸಿಎಂ ಮುಖ್ಯಸ್ಥ ಇಕ್ಬಾಲ್ ಸಿಂಗ್ ಲಾಲ್ಪುರ ಅವರು ಇಲ್ಲಿ ಪತ್ರಿಕಾ ಸಂವಾದದಲ್ಲಿ ಸುದ್ದಿಗಾರರೊಂದಿಗೆ ಎರಡು ಘಟನೆಗಳ ಬಗ್ಗೆ ಆಯೋಗ ಕೈಗೊಂಡ ಕ್ರಮಗಳನ್ನು ಹಂಚಿಕೊಂಡಿದ್ದಾರೆ. ಕಸ್ಟಡಿ ಸಾವಿನ ಪ್ರಕರಣದಲ್ಲಿ, ಎನ್ಸಿಎಂ ಉತ್ತರ ಪ್ರದೇಶದ ಡಿಜಿಪಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ಕೇಳಿದೆ ಎಂದು ಲಾಲ್ಪುರ ಹೇಳಿದರು.
ಅಪಹರಣ ಪ್ರಕರಣದಲ್ಲಿ ಕಾಸ್ಗಂಜ್ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆದಿದ್ದ ವ್ಯಕ್ತಿ ಮಂಗಳವಾರ ಕಸ್ಟಡಿಯಲ್ಲಿ ಮೃತಪಟ್ಟಿದ್ದು, ಆತನನ್ನು ಪೊಲೀಸ್ ಸಿಬ್ಬಂದಿಯೇ ಕೊಂದಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆದಾಗ್ಯೂ, ಮೃತ ಅಲ್ತಾಫ್ (22 ವರ್ಷ) ಪೊಲೀಸ್ ಲಾಕ್-ಅಪ್ನ ವಾಶ್ರೂಮ್ನಲ್ಲಿ ನೇಣುಹಾಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯಲ್ಲಿ ನಿರ್ಲಕ್ಷ್ಯ ತೋರಿದ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು.







