ದಿಲ್ಲಿಯ ವಾಯಮಾಲಿನ್ಯಕ್ಕೆ ವಾಹನಗಳ ಹೊಗೆಯ ಅತ್ಯಂತ ಹೆಚ್ಚಿನ ಕೊಡುಗೆ: ವರದಿ

ಹೊಸದಿಲ್ಲಿ,ನ.12: ದಿಲ್ಲಿಯ ವಾಯುಮಾಲಿನ್ಯಕ್ಕೆ ಸ್ಥಳೀಯ ಮೂಲಗಳ ಪೈಕಿ ವಾಹನಗಳಿಂದ ಹೊರಸೂಸುವ ಹೊಗೆಯು ಅತ್ಯಂತ ಹೆಚ್ಚಿನ ಕೊಡುಗೆಯನ್ನು ಸಲ್ಲಿಸುತ್ತದೆ ಎಂದು ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ತನ್ನ ವರದಿಯಲ್ಲಿ ತಿಳಿಸಿದೆ.
ದಿಲ್ಲಿಯ ಗಾಳಿಯಲ್ಲಿರುವ ಉಸಿರಾಡಿಸಬಹುದಾದ ಪಾರ್ಟಿಕ್ಯುಲೇಟ್ ಕಣಗಳು,ವಿಶೇಷವಾಗಿ ಪಿಎಂ2.5 ಅಥವಾ 2.5 ಮೈಕ್ರೋನ್ಗಿಂತ ಕಡಿಮೆ ಗಾತ್ರದ ಪಾರ್ಟಿಕ್ಯುಲೇಟ್ ಕಣಗಳು ಮಾನವ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ಇವು ಉಸಿರಾಟ ವ್ಯವಸ್ಥೆಯ ಆಳವನ್ನು ಪ್ರವೇಶಿಸುತ್ತವೆ ಮತ್ತು ಶ್ವಾಸಕೋಶಗಳ ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಸಿಎಸ್ಐ ಅ.24ರಿಂದ ನ.8ರವರೆಗಿನ ಅವಧಿಯಲ್ಲಿ ಪ್ರತಿ ಪರ್ಯಾಯ ಗಂಟೆಯ ದತ್ತಾಂಶಗಳನ್ನು ವಿಶ್ಲೇಷಿಸಿ ತನ್ನ ವರದಿಯನ್ನು ಸಿದ್ಧಗೊಳಿಸಿದೆ. ಪ್ರತಿ ವರ್ಷದ ಅಕ್ಟೋಬರ್ ಮತ್ತು ನವಂಬರ್ ನಲ್ಲಿ ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಗಳ ಸುಡುವಿಕೆ,ಪ್ರತಿಕೂಲವಾದ ಗಾಳಿಯ ವೇಗ ಮತ್ತು ನಗರದಲ್ಲಿ ವಾಹನಗಳ ಸಂಚಾರದಿಂದ ಹೊರಸೂಸುವ ಹೊಗೆಯಿಂದಾಗಿ ದಿಲ್ಲಿಯ ವಾಯುಮಾಲಿನ್ಯವು ತೀವ್ರ ಹದಗೆಡುತ್ತದೆ.
ದಿಲ್ಲಿಯ ವಾಯುಮಾಲಿನ್ಯದಲ್ಲಿ ವಾಹನಗಳ ಹೊಗೆಯ ಪಾಲು ಶೇ.50 ಅಥವಾ ಅದಕ್ಕೂ ಹೆಚ್ಚಿರುವುದನ್ನು ವಿಶ್ಲೇಷಣೆಯು ತೋರಿಸಿದೆ. ನಂತರ ಸ್ಥಾನಗಳಲ್ಲಿ ಮನೆಗಳ ಮಾಲಿನ್ಯ (ಶೇ.12.5-ಶೇ.13.5),ಕೈಗಾರಿಕೆಗಳು (ಶೇ.9.9-ಶೇ.13.7),ನಿರ್ಮಾಣ ಕಾಮಗಾರಿ (ಶೇ.6.7-ಶೇ.7.9),ತ್ಯಾಜ್ಯ ಸುಡುವಿಕೆ (ಶೇ.4.6-ಶೇ.4.9) ಮತ್ತು ರಸ್ತೆ ಧೂಳು (ಶೇ.3.6-ಶೇ.4.1) ಇವೆ ಎಂದು ಸಿಎಸ್ಐ ತಿಳಿಸಿದೆ.
ಸಂಚಾರ ದಟ್ಟಣೆಯ ಅವಧಿಯೂ ದಿನದ ವಾಯುಮಾಲಿನ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ಹೇಳಿರುವ ವರದಿಯು, ಪಿಎಂ2.5 ಮೇಲೆ ಇತರ ಹಲವಾರು ಅಂಶಗಳು ಪ್ರಭಾವವನ್ನು ಹೊಂದಿದ್ದರೆ ನೈಟ್ರೋಜನ್ ಡೈಯಾಕ್ಸೈಡ್ ವಾಹನಗಳ ಸಂಚಾರಕ್ಕೆ ನಿಕಟವಾಗಿ ಸಂಬಂಧಿಸಿದೆ. ಅಧ್ಯಯನದ ಅವಧಿಯಲ್ಲಿ ನೈಟ್ರೋಜನ್ ಡೈಯಾಕ್ಸೈಡ್ ಮಟ್ಟಗಳು ವಾಹನಗಳ ದಟ್ಟಣೆಯೊಂದಿಗೆ ಗಾಢ ಸಂಬಂಧವನ್ನು ತೋರಿಸಿವೆ. ವಾಹನಗಳ ವೇಗ ಕಡಿಮೆಯಾದಾಗ ಈ ಮಟ್ಟಗಳು ಹೆಚ್ಚಾಗುತ್ತವೆ ಎಂದು ತಿಳಿಸಿದೆ.
ರಾಷ್ಟ್ರ ರಾಜಧಾನಿ ವಲಯದಲ್ಲಿಯ 19 ಜಿಲ್ಲೆಗಳ ಮಾಲಿನ್ಯಕಾರಕಗಳ ಮತ್ತು ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಗಳ ಸುಡುವಿಕೆಯ ಕೊಡುಗೆಗಳನ್ನೂ ವರದಿಯು ಗಮನಕ್ಕೆ ತೆಗೆದುಕೊಂಡಿದೆ.







