ಐಎಮ್‌ಡಿಬಿ ಶ್ರೇಯಾಂಕದಲ್ಲಿ ಹಾಲಿವುಡ್ ನ ʼಶಾವ್ಶಾಂಕ್ʼ ಅನ್ನು ಹಿಂದಿಕ್ಕಿದ ತಮಿಳಿನ ʼಜೈ ಭೀಮ್ʼ ಚಿತ್ರ

ಹೊಸದಿಲ್ಲಿ: ಪೊಲೀಸ್ ದೌರ್ಜನ್ಯದ ಕಥೆ ಹಾಗೂ ನ್ಯಾಯಕ್ಕಾಗಿ ಹೋರಾಡುವ ಮಹಿಳೆಗೆ ನ್ಯಾಯ ದೊರಕಿಸಿಕೊಡಲು ವಕೀಲರು ನಡೆಸುವ ಶ್ರಮದ ಕುರಿತು ಟಿ.ಜೆ. ಜ್ಞಾನವೇಲು ನಿರ್ದೇಶನದ ತಮಿಳು ಸಿನಿಮಾ ʼಜೈಭೀಮ್ʼ ನೂತನ ದಾಖಲೆಯೊಂದನ್ನು ಬರೆದಿದೆ. ಐಎಮ್‌ಡಿಬಿ ಶ್ರೇಯಾಂಕದಲ್ಲಿ ಹಾಲಿವುಡ್ ನ ʼಶ್ವಾಶಾಂಕ್ ರಿಡೆಂಪ್ಶನ್ʼ (9.3) ಅನ್ನು ಹಿಂದಿಕ್ಕಿದ ಜೈಭೀಮ್ ಸಿನಿಮಾ 9.6 ರೇಟಿಂಗ್ ಪಡೆದಿದೆ.
ಟಿ.ಜೆ ಜ್ಞಾನವೇಲ್ ನಿರ್ದೇಶಿಸಿದ ಈ ಚಿತ್ರದಲ್ಲಿ ನಟರಾದ ಸೂರ್ಯ, ಮಣಿಕಂದನ್, ಲಿಜೋಮೋಲ್ ಜೋಸ್, ರಜಿಶಾ ವಿಜಯನ್, ರಮೇಶ್ ರಾವ್, ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ.
ಚಿತ್ರವು ಬಿಡುಗಡೆಯಾದಾಗಿನಿಂದ ವೀಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ವಾಣಿಜ್ಯಾತ್ಮಕವಾಗಿಯೂ ಉತ್ತಮ ಸಾಧನೆ ಮಾಡಿದೆ. ಹಲವು ವೀಕ್ಷಕರು ನೀಡಿದ ರೇಟಿಂಗ್ ಮೇಲೆ ಐಮ್‌ಡಿಬಿಯ ಶ್ರೇಯಾಂಕವು ನಿಗದಿಯಾಗುತ್ತದೆ. ಹಾಲಿವುಡ್ ನ ಫ್ರಾಂಕ್ ಡರ್ರಾಬಾಂಟ್ ನಿರ್ದೇಶನದ ಶಾವ್ಶಾಂಕ್ ರಿಡಂಪ್ಶನ್ ನ 9.3 ರೇಟಿಂಗ್ ಅನ್ನು ಹಿಂದಿಕ್ಕಿ ಜೈಭೀಮ್ ಮೊದಲ ಸ್ಥಾನ ಪಡೆದುಕೊಂಡಿದೆ.