ಯುದ್ಧಗಳು ತುಂಬ ದುಬಾರಿಯಾಗಿವೆ ಮತ್ತು ಕೈಗೆಟಕುವುದಿಲ್ಲ:ಎನ್ಎಸ್ಎ ದೋವಲ್
ಹೈದರಾಬಾದ್,ನ.12: ಯುದ್ಧಗಳು ಈಗ ರಾಜಕೀಯ ಅಥವಾ ಮಿಲಿಟರಿ ಗುರಿಗಳನ್ನು ಸಾಧಿಸಲು ಪರಿಣಾಮಕಾರಿ ಸಾಧನಗಳಾಗಿ ಉಳಿದಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ ದೋವಲ್ ಅವರು ಶುಕ್ರವಾರ ಇಲ್ಲಿ ಹೇಳಿದರು.
ಇಲ್ಲಿಯ ಪೊಲೀಸ್ ಅಕಾಡಮಿಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿರುವ ಐಪಿಎಸ್ ಅಧಿಕಾರಿಗಳ ನಿರ್ಗಮನ ಪಥಸಂಚಲನದಲ್ಲಿ ಮಾತನಾಡಿದ ದೋವಲ್,ಯುದ್ಧಗಳ ಫಲಿತಾಂಶಗಳೂ ಅನಿಶ್ಚಿತವಾಗಿವೆ ಎಂದರು.
ದೇಶದ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಪೊಲೀಸರ ಹೊಣೆಗಾರಿಕೆಯಾಗಿದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಅವರು,ಕಾನೂನು ಜಾರಿ ಮಾಡುವವರು ದುರ್ಬಲರಾಗಿದ್ದರೆ,ಭ್ರಷ್ಟರಾಗಿದ್ದರೆ ಅಥವಾ ಪಕ್ಷಪಾತಿಗಳಾಗಿದ್ದರೆ ಜನರಲ್ಲಿ ಸುರಕ್ಷತೆಯ ಭಾವನೆ ಮೂಡುವುದಿಲ್ಲ ಎಂದರು.
ದೇಶದ ಹಿತಾಸಕ್ತಿಗಳಿಗೆ ಹಾನಿಯನ್ನುಂಟು ಮಾಡಲು ಹಸ್ತಕ್ಷೇಪ ಮಾಡಬಹುದಾದ ನಾಗರಿಕ ಸಮಾಜ ಈಗ ಹೊಸ ಯದ್ಧಕಣಗಳಾಗಿವೆ ಎಂದು ದೋವಲ್ ಹೇಳಿದರು. ಅಧಿಕಾರಿಗಳು ಇರುವುದು ಜನರ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಎಂದು ಹೇಳಿದ ಅವರು,‘ಜನರ ಸೇವೆಯು ನಮ್ಮ ರಾಷ್ಟ್ರನಿರ್ಮಾಣದ ದೃಷ್ಟಿಯಿಂದ ಮಾತ್ರವಲ್ಲ,ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಲೂ ಮಹಾನ್ ಸೇವೆಯಾಗಿದೆ ’ ಎಂದರು.
ದೇಶದ ಪ್ರತಿಯೊಂದೂ ಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ಪೊಲೀಸ್ ಪಡೆಗಳ ಜವಾಬ್ದಾರಿಯಾಗಿದೆ ಎಂದ ದೋವಲ್,ಪೊಲೀಸ್ ಕರ್ತವ್ಯವು ನೀವು ತರಬೇತಿ ಪಡೆದಿರುವುದಕ್ಕೆ ಮಾತ್ರವಲ್ಲ,ಅದರಾಚೆಗೂ ವಿಸ್ತರಿಸುತ್ತದೆ. ಈ ದೇಶದ ಗಡಿ ನಿರ್ವಹಣೆ ನಿಮ್ಮ ಜವಾಬ್ದಾರಿಯಾಗಿದೆ.15,000 ಕಿ.ಮೀ.ಉದ್ದದ ಗಡಿಯ ಹೆಚ್ಚಿನ ಭಾಗ ತನ್ನದೇ ಆದ ವಿಶಿಷ್ಟ ಸಮಸ್ಯೆಗಳನ್ನು ಹೊಂದಿದೆ ಎಂದರು.
ಕೇವಲ ಸುಧಾರಣೆಗಳ ಬಗ್ಗೆ ಯೋಚಿಸದೇ ಹಿಂದಿನ ತಲೆಮಾರುಗಳು ಮಾಡಿದ್ದ ತಪ್ಪುಗಳಿಂದ ದೂರವಿರುವಂತೆಯೂ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ ಅವರು,ನೀವು ಪರಿವರ್ತನೀಯರಾಗಬೇಕು. ಈಗ ಪೊಲೀಸ್ ಪಡೆಗಳು ಪರಿವರ್ತನೆಯನ್ನು ತರಬೇಕಿವೆ,ಭವಿಷ್ಯದ ಬಗ್ಗೆಯೂ ಯೋಚಿಸಿ ಮತ್ತು ಪರಿಹಾರವನ್ನು ಇಂದೇ ಕಂಡುಕೊಳ್ಳಿ ಎಂದರು. ನೀವು ಪೊಲೀಸ್ ನಾಯಕರಾಗಿ ಮಾತ್ರ ಈ ಅಕಾಡಮಿಯಿಂದ ಹೊರಬೀಳುತ್ತಿಲ್ಲ,ನೀವು ಮುಂಬರುವ ಉಜ್ವಲ ಭಾರತದ ಯೋಧರೂ ಆಗಿದ್ದೀರಿ. ನೀವಿಲ್ಲದೆ ಈ ದೇಶವು ಯಶಸ್ಸು ಸಾಧಿಸುವುದಿಲ್ಲ ಎಂದು ದೋವಲ್ ನುಡಿದರು.







