ವಿಧಾನಪರಿಷತ್ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಹುತೇಕ ಅಂತಿಮ?

ಬೆಂಗಳೂರು, ನ.12: ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಹುತೇಕ ಅಂತಿಮಗೊಂಡಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಒಂದು ಸುತ್ತಿನ ಚರ್ಚೆ ನಡೆದಿದೆ ಎನ್ನಲಾಗಿದೆ. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೊಸದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆಯೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಸಿದ್ದಾರೆ.
ಬಹುತೇಕ ಹಾಲಿ ಸದಸ್ಯರಾದ ಬಿ.ಜಿ.ಪಾಟೀಲ್(ಕಲಬುರಗಿ), ಪ್ರದೀಪ್ ಶೆಟ್ಟರ್(ಧಾರವಾಡ), ಮಹಾಂತೇಶ್ ಕವಟಗಿಮಠ(ಬೆಳಗಾವಿ), ಕೋಟ ಶ್ರೀನಿವಾಸ ಪೂಜಾರಿ(ದಕ್ಷಿಣ ಕನ್ನಡ), ಎಂ.ಕೆ.ಪ್ರಾಣೇಶ್(ಚಿಕ್ಕಮಗಳೂರು) ಅವರನ್ನೆ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದ್ದು, ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
Next Story





