ಪ್ರಧಾನಿ ಮೋದಿ 4 ಗಂಟೆಯ ಭೇಟಿಗೆ 23 ಕೋ.ರೂ. ವೆಚ್ಚ ಮಾಡಲಿದೆ ಮಧ್ಯಪ್ರದೇಶ!

ಭೋಪಾಲ್ , ನ.13: ಭಗವಾನ್ ಬಿರ್ಸಾ ಮುಂಡ ಅವರ ಸ್ಮರಣೆಯಲ್ಲಿ ಜಂಜಾತಿಯಾ ಗೌರವ ದಿವಸವನ್ನು ಮಧ್ಯಪ್ರದೇಶ ಈ ತಿಂಗಳ 15ರಂದು ಆಚರಿಸಲಿದೆ. ಈ ದಿನವನ್ನು ಬುಡಕಟ್ಟು ಯೋಧರಿಗೆ ಸಮರ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಭೋಪಾಲ್‌ನ ಜಂಬೋರಿ ಮೈದಾನದಲ್ಲಿ ನಡೆಯುವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದು, ದೇಶದ ಮೊಟ್ಟಮೊದಲ ಸರ್ಕಾರಿ- ಖಾಸಗಿ ಪಾಲುದಾರಿಕೆಯಲ್ಲಿ ನಿರ್ಮಿಸಲಾದ ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಿದ್ದಾರೆ.
ಜಂಜಾತಿಯಾ ಗೌರವ ದಿನದ ಅಂಗವಾಗಿ ಒಂದು ವಾರದ ಕಾರ್ಯಕ್ರಮಗಳನ್ನು ದೇಶವ್ಯಾಪಿ ನವೆಂಬರ್ 15ರಿಂದ 22ರವರೆಗೆ ಆಚರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಬಿರ್ಸಾ ಮುಂಡ ಮತ್ತು ಇತರ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಗೌರವಾರ್ಥ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೋದಿ ಪಾಲ್ಗೊಳ್ಳುವ ಜಂಬೋರಿ ಮೈದಾನ ಸಮಾರಂಭದಲ್ಲಿ ಮಧ್ಯಪ್ರದೇಶದ ಮೂಲೆ ಮೂಲೆಗಳಿಂದ ಆಗಮಿಸುವ 2 ಲಕ್ಷ ಮಂದಿ ಬುಡಕಟ್ಟು ಜನರು ಭಾಗವಹಿಸುವ ನಿರೀಕ್ಷೆ ಇದೆ. ಇಡೀ ಸಭಾಂಗಣವನ್ನು ಬುಡಕಟ್ಟು ಕಲೆ ಮತ್ತು ಬುಡಕಟ್ಟು ದಂತಕಥೆಗಳ ಚಿತ್ರಗಳಿಂದ ಅಲಂಕರಿಸಲಾಗಿದೆ.
ಭೋಪಾಲ್‌ನಲ್ಲಿ ನಾಲ್ಕು ಗಂಟೆ ಕಳೆಯುವ ಪ್ರಧಾನಿ ಮೋದಿ ಸಮಾರಂಭದಲ್ಲಿ 1 ಗಂಟೆ 15 ನಿಮಿಷಗಳ ಕಾಲ ಇರುತ್ತಾರೆ. ಇದಕ್ಕಾಗಿ ಐದು ಗುಮ್ಮಟಗಳನ್ನು ನಿರ್ಮಿಸಲಾಗಿದೆ. ಬುಡಕಟ್ಟು ಜನರಿಗಾಗಿ ದೊಡ್ಡ ಪೆಂಡಾಲ್ ನಿರ್ಮಿಸಲಾಗಿದೆ. ಒಂದು ವಾರ ಕಾಲ 300 ಕಾರ್ಮಿಕರು ಇದಕ್ಕಾಗಿ ದುಡಿಯತ್ತಿದ್ದಾರೆ. ರಾಜ್ಯ ಸರ್ಕಾರ ಈ ಕಾರ್ಯಕ್ರಮಕ್ಕೆ 23 ಕೋಟಿ ರೂಪಾಯಿ ವೆಚ್ಚ ಮಾಡಲಿದ್ದು, ಜನರನ್ನು ಜಂಬೋರಿ ಮೈದಾನಕ್ಕೆ ಕರೆ ತರಲು 13 ಕೋಟಿ ರೂಪಾಯಿ ವ್ಯಯಿಸುತ್ತಿದೆ. 52 ಜಿಲ್ಲೆಗಳಿಂದ ಜನರನ್ನು ಕರೆ ತರಲು ರೂ.12 ಕೋಟಿಗೂ ಅಧಿಕ ಹಣ ವೆಚ್ಚ ಮಾಡಿದರೆ, ಐದು ಗುಮ್ಮಟಗಳ ನಿರ್ಮಾಣಕ್ಕೆ, ಅಲಂಕಾರ ಹಾಗೂ ಪ್ರಚಾರಕ್ಕೆ 9 ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ವರದಿಯಾಗಿದೆ.







