ಸಾವಿರ ವರ್ಷದಲ್ಲೇ ಸುದೀರ್ಘ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಲಿದೆ ಜಗತ್ತು!

ಫೈಲ್ ಫೋಟೊ (source: PTI)
ಹೊಸದಿಲ್ಲಿ, ನ.13: ನವೆಂಬರ್ 19ರಂದು ನಡೆಯಲಿರುವ ಖಂಡಗ್ರಾಸ ಚಂದ್ರಗ್ರಹಣ 1,000 ವರ್ಷಗಳಲ್ಲೇ ಅತ್ಯಂತ ಸುದೀರ್ಘ ಗ್ರಹಣವಾಗಲಿದೆ. ಇಷ್ಟು ಸುದೀರ್ಘ ಚಂದ್ರಗ್ರಹಣ ಈ ಹಿಂದೆ 1440ರ ಫೆಬ್ರವರಿ 18ರಂದು ಸಂಭವಿಸಿತ್ತು. ಈ ಬಾರಿ ಸಂಭವಿಸುವ ಚಂದ್ರಗ್ರಹಣದಷ್ಟು ಸುದೀರ್ಘ ಗ್ರಹಣವನ್ನು ಮುಂದೆ ನೋಡಬೇಕಿದ್ದರೆ ಜಗತ್ತು 2669ರ ಫೆಬ್ರವರಿ 8ರವರೆಗೆ ಕಾಯಬೇಕಾಗುತ್ತದೆ.
ಕರಿ ನೆರಳು ಮತ್ತು ಈ ನಿರ್ದಿಷ್ಟ ಚಂದ್ರಗ್ರಹಣದ ಮೊದಲ ಹಂತದಲ್ಲಿ ಭೂಮಿಯ ತೆಳು ನೆರಳು ಚಂದ್ರನ ಮೇಲೆ ಬೀಳಲಿದ್ದು, ಇದರ ಗೋಚರತೆಯನ್ನು ಅಲ್ಪಪ್ರಮಾಣದಲ್ಲಿ ಮಾತ್ರ ಬದಲಾಯಿಸಲಿದೆ ಎಂದು ಭಾರತದ ಹವಾಮಾನ ಇಲಾಖೆಯ ವೆಬ್ಸೈಟ್ ಹೇಳಿದೆ.
ಭಾರತದಲ್ಲಿ ಈ ಗ್ರಹಣ ಅತ್ಯಂತ ಅಲ್ಪಾವಧಿಯಲ್ಲಿ ಮಾತ್ರ ಗೋಚರಿಸಲಿದ್ದು, ದೇಶದ ಈಶಾನ್ಯ ಭಾಗದಲ್ಲಿ ಅಂದರೆ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನಲ್ಲಿ ಕಾಣಿಸಿಕೊಳ್ಳಲಿದೆ. "ಈ ಗ್ರಹಣದ ಖಂಡಗ್ರಾಸ ಹಂತ ನ.19ರಂದು ಮಧ್ಯಾಹ್ನ 12:48ಕ್ಕೆ ಆರಂಭವಾಗಲಿದ್ದು, ಸಂಜೆ 4:17ಕ್ಕೆ ಕೊನೆಗೊಳ್ಳಲಿದೆ ಎಂದು ವಿವರ ನೀಡಿದೆ.
ನವೆಂಬರ್ 18-19ರಂದು ಸಂಭವಿಸುವ ಗ್ರಹಣ ಈ ವರ್ಷದ ಕೊನೆಯ ಗ್ರಹಣವೂ ಆಗಿದೆ. ಮುಂದಿನ ಚಂದ್ರಗ್ರಹಣ 2022ರ ನವೆಂಬರ್ 8ರಂದು ಸಂಭವಿಸಲಿದ್ದು, ಇದು ಖಗ್ರಾಸ ಚಂದ್ರಗ್ರಹಣವಾಗಿರುತ್ತದೆ.







