18 ತಿಂಗಳಲ್ಲಿ ಜೀವನದ 10 ವರ್ಷ ಕಳೆದುಕೊಂಡಂತಾಗಿದೆ ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಹೇಳಿದ್ದೇಕೆ ಗೊತ್ತೆ?

ಹೈದರಾಬಾದ್, ನ.13: ಕೋವಿಡ್-19 ಸಾಂಕ್ರಾಮಿಕ ಇಡೀ ವಿಶ್ವವನ್ನು ಸ್ತಬ್ಧಗೊಳಿಸಿರಬಹುದು. ಆದರೆ ಭಾರತ್ ಬಯೋಟೆಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಅವರ ಜೀವನ ಮಾತ್ರ ಈ ಅವಧಿಯಲ್ಲಿ ವೇಗವರ್ಧನೆ ಪಡೆದಿದೆ. ಕಳೆದ ಹದಿನೆಂಟು ತಿಂಗಳ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುವ ಕುರಿತ ಒತ್ತಡದಲ್ಲಿ ತಮ್ಮ ಜೀವನದ 10 ವರ್ಷಗಳು ಕಳೆದಂತಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಮೊಟ್ಟಮೊದಲ ದೇಶೀಯ ಕೋವಿಡ್-19 ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿನ ರೋಮಾಂಚಕ ಅನುಭವವನ್ನು ಟೈಮ್ಸ್ ಆಫ್ ಇಂಡಿಯಾ ಜತೆಗೆ ಹಂಚಿಕೊಂಡ ಅವರು, ಲಸಿಕೆ ಅಭಿವೃದ್ಧಿಪಡಿಸುವ ಅವಧಿಯುದ್ದಕ್ಕೂ ಕಂಪೆನಿ ಎದುರಿಸಿದ ಅಪಾಯ ಹಾಗೂ ವೈರುದ್ಧ್ಯಗಳ ಬಗ್ಗೆಯೂ ವಿವರಿಸಿದರು. "ಕಳೆದ 18 ತಿಂಗಳುಗಳು ಅತ್ಯಂತ ಕಠಿಣ. ಭಾರತ್ ಬಯೋಟೆಕ್ ಕಂಪೆನಿಯನ್ನು ಸ್ಥಾಪಿಸಿದ ಬಳಿಕ ಕಳೆದ 25 ವರ್ಷಗಳಲ್ಲಿ ಇಂಥ ಸಂಘರ್ಷವನ್ನು ಎದುರಿಸಲಿಲ್ಲ" ಎಂದು ಅವರು ಹೇಳುತ್ತಾರೆ. "ಈ ಯುದ್ಧದಲ್ಲಿ ನನ್ನ ಜೀವನದ 10 ಶಾಂತಿಯುತ ವರ್ಷಗಳನ್ನು ಕಳೆದುಕೊಂಡ ಅನುಭವ ಆಗುತ್ತಿದೆ" ಎನ್ನುವುದು ಅವರ ಮನದಾಳದ ಮಾತು.
ಕೊವ್ಯಾಕ್ಸಿನ್ ತಮ್ಮ ಕಂಪೆನಿ ಅಭಿವೃದ್ಧಿಪಡಿಸಿದ ಮೊದಲ ಲಸಿಕೆ ಅಲ್ಲದಿದ್ದರೂ, ಭಾರತ್ ಬಯೋಟೆಕ್ ನಿರಂತರವಾಗಿ ಸುದ್ದಿಯಲ್ಲಿದ್ದುದು ಇದೇ ಮೊದಲು ಎನ್ನುವುದು ಅವರ ಅಭಿಮತ. "ಕೊವ್ಯಾಕ್ಸಿನ್‌ಗಾಗಿ ನಾವು 1000 ಲೀಟರ್ ಕಿಣ್ವ (ಫರ್ಮೆಂಟರ್)ದೊಂದಿಗೆ ಪ್ರಯೋಗ ನಡೆಸಿದ್ದೇವೆ. ಅಂಥ ಅಧಿಕ ಸಾಂದ್ರತೆಯ ಜೀವಂತ ವೈರಸ್‌ಗಳು ಇಡೀ ಭಾರತಕ್ಕೆ ಸೋಂಕು ಹರಡಲು ಸಾಕಾಗುವಷ್ಟಾಗಿತ್ತು. ಅದು ಅತ್ಯಂತ ಅಪಾಯಕಾರಿ" ಎಂದು ಬಣ್ಣಿಸಿದರು.
ಲಸಿಕೆ ಕೂಡಾ ಇಲ್ಲದ ಅವಧಿಯಲ್ಲಿ ಕಂಪೆನಿಯಲ್ಲಿ ಸೋಂಕಿನಿಂದಾಗಿ ಯಾವುದೇ ಸಾವು ಸಂಭವಿಸಿದ್ದಲ್ಲಿ ಅದು ವಿನಾಶಕಾರಿಯಾಗುತ್ತಿತ್ತು ಎಂದು ರೋಚಕ ಅನುಭವವನ್ನು ಹಂಚಿಕೊಂಡರು. "ಇಂದು ನಮಗೆ ಲಸಿಕೆ ನೀಡಲಾಗಿದೆ. ಆದರೆ ಅಂದು ಲಸಿಕೆ ಇರಲಿಲ್ಲ. ಆದ್ದರಿಂದ ಸುಮಾರು 4-5 ತಿಂಗಳು ನಮ್ಮ 20-25 ಮಂದಿ ಪ್ರಮುಖ ಸಿಬ್ಬಂದಿ ತಮ್ಮ ಮನೆಗಳಿಗೆ ಹೋಗುವಂತಿರಲಿಲ್ಲ. ನಮ್ಮ ಘಟಕಕ್ಕೆ ಸನಿಹದಲ್ಲಿದ್ದ ಅಪಾರ್ಟ್‌ಮೆಂಟ್‌ಗಳನ್ನು ಪಡೆದು, ಲಸಿಕೆ ಶೇಕಡ 100ರಷ್ಟು ಸುರಕ್ಷಿತ ಎಂದು ಪ್ರಾಣಿ ಸವಾಲು ಅಧ್ಯಯನದಲ್ಲಿ ಸಾಬೀತಾಗುವವರೆಗೂ ಅವರೆಲ್ಲರನ್ನೂ ಅಲ್ಲಿರಿಸಿದ್ದೆವು" ಎಂದು ವಿವರಿಸಿದರು.







