'ಮನೆಯಲ್ಲೂ ಮಾಸ್ಕ್ ಧರಿಸುವಂತಾಗಿದೆ': ದಿಲ್ಲಿ ವಾಯು ಮಾಲಿನ್ಯ ಬಗ್ಗೆ ಸುಪ್ರೀಂಕೋರ್ಟ್
ಅಗತ್ಯವಿದ್ದರೆ ಎರಡು ದಿನಗಳ ಲಾಕ್‌ಡೌನ್ ಘೋಷಿಸಿ

ಹೊಸದಿಲ್ಲಿ: ದಿಲ್ಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವು ಜನರು ತಮ್ಮ ಮನೆಗಳಲ್ಲಿಯೂ ಕೂಡ ಮಾಸ್ಕ್ ಗಳನ್ನು ಧರಿಸುವಂತೆ ಮಾಡಿದೆ ಎಂದು ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸುತ್ತಿರುವಾಗ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದ್ದಾರೆ.
"ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದು ನೀವೇ ನೋಡಿ.... ನಮ್ಮ ಮನೆಗಳಲ್ಲಿಯೂ ಸಹ ನಾವು ಮಾಸ್ಕ್ ಗಳನ್ನು ಧರಿಸಿದ್ದೇವೆ" ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧದ ಉಲ್ಲಂಘನೆ ಹಾಗೂ ನೆರೆಯ ರಾಜ್ಯಗಳಲ್ಲಿ ಗದ್ದೆಗಳಲ್ಲಿ ಹುಲ್ಲು ಸುಡುವ ಕೆಲಸದ ಹೆಚ್ಚಳವು ದಿಲ್ಲಿ ವಾಯುಮಾಲಿನ್ಯಕ್ಕೆ ಕೊಡುಗೆ ನೀಡಿದೆ.
ಬೆಳೆ ತ್ಯಾಜ್ಯ ದಹನವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದ ಕೇಂದ್ರ ಸರಕಾರವು, "ನಾವು ಬೆಳೆ ತ್ಯಾಜ್ಯ ಸುಡುವುದನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದರೆ ಕಳೆದ ಐದಾರು ದಿನಗಳಲ್ಲಿ ನಾವು ಈ ರೀತಿಯ ಮಾಲಿನ್ಯವನ್ನು ನೋಡಿದ್ದೇವೆ. ಪಂಜಾಬ್‌ನಲ್ಲಿ ಬೆಳೆ ತ್ಯಾಜ್ಯ ದಹಿಸುತ್ತಿರುವುದರಿಂದ ನಾವು ಇದನ್ನು ನೋಡುತ್ತಿದ್ದೇವೆ. ರಾಜ್ಯ ಸರಕಾರವು ಇದನ್ನ ನಿಯಂತ್ರಿಸಬೇಕಾಗಿದೆ... ಹೊಲಗಳಲ್ಲಿ ಹುಲ್ಲು ಸುಡುವಿಕೆ ನಡೆಯುತ್ತಿದೆ ಎಂದಿದೆ.
ಇದಕ್ಕೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ ರಮಣ "ರೈತರಿಂದಲೇ ಮಾಲಿನ್ಯ ಆಗುತ್ತಿದೆ ಎಂದು ನೀವು ಏಕೆ ಬಿಂಬಿಸುತ್ತಿದ್ದೀರಿ? ಇದು ನಿರ್ದಿಷ್ಟ ಶೇಕಡಾವಾರು ಮಾಲಿನ್ಯ ಮಾತ್ರ. ಉಳಿದದ್ದು ಏನು? ದಿಲ್ಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಏನು ಮಾಡುತ್ತಿದ್ದೀರಿ?"ಎಂದು ಪ್ರಶ್ನಿಸಿದರು.
ಅಗತ್ಯವಿದ್ದರೆ ಎರಡು ದಿನಗಳ ಲಾಕ್‌ಡೌನ್ ಘೋಷಿಸಿ
ದಿಲ್ಲಿ-ಎನ್‌ಸಿಆರ್ ಅನ್ನು ಆವರಿಸಿರುವ ತೀವ್ರ ವಾಯು ಮಾಲಿನ್ಯವನ್ನು ಭಾರತದ ಸುಪ್ರೀಂ ಕೋರ್ಟ್ ಶನಿವಾರ ಗಂಭೀರವಾಗಿ ಪರಿಗಣಿಸಿದ್ದು ವಾಹನಗಳು, ಪಟಾಕಿಗಳು, ಕೈಗಾರಿಕೆಗಳು ಹಾಗೂ ಧೂಳಿನಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸಲು ಎರಡು ದಿನಗಳ ಲಾಕ್‌ಡೌನ್ ಘೋಷಿಸಿ ಎಂದು ಹೇಳಿದೆ.