ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ ಒಗ್ಗೂಡಿದರೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ: ಅಮಿತ್ ಶಾ

ಲಕ್ನೊ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಸಿದ್ಧತೆಗಳನ್ನು ಆರಂಭಿಸಿರುವ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 403 ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳು, ಜಿಲ್ಲಾ ಮತ್ತು ಪ್ರಾದೇಶಿಕ ಘಟಕಗಳ ನಾಯಕರು ಸೇರಿದಂತೆ ರಾಜ್ಯದಾದ್ಯಂತದ ಸಾಂಸ್ಥಿಕ ಕಾರ್ಯಕರ್ತರನ್ನು ಉದ್ದೇಶಿಸಿ ಶುಕ್ರವಾರ ವಾರಣಾಸಿಯಲ್ಲಿ ಮಾತನಾಡಿದರು.
ಮುಹಮ್ಮದ್ ಅಲಿ ಜಿನ್ನಾ ಕುರಿತು ಇತ್ತೀಚೆಗೆ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಗುರಿಯಾಗಿಸಿಕೊಂಡ ಶಾ, ಸರ್ದಾರ್ ಪಟೇಲ್ ಅವರೊಂದಿಗೆ ಜಿನ್ನಾರನ್ನು ಹೋಲಿಸುವ ಮೂಲಕ ಅಖಿಲೇಶ್ ಯಾದವ್ ಪ್ರಾಮಾಣಿಕತೆಯ ಕೊರತೆಯನ್ನು ತೋರಿಸಿದ್ದಾರೆ. ಬಿಎಸ್‌ಪಿ ಹಾಗೂ ಕಾಂಗ್ರೆಸ್ ದುರ್ಬಲವಾಗಿದ್ದು, ಎಸ್ಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್ ಮೂರೂ ಪಕ್ಷಗಳು ಒಗ್ಗೂಡಿದರೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮೂಲಗಳ ಪ್ರಕಾರ, ಶಾ ಅವರು ಕಾನೂನು ಮತ್ತು ಸುವ್ಯವಸ್ಥೆ, ಮಾಫಿಯಾ ವಿರುದ್ಧ ಕ್ರಮ ಹಾಗೂ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ಸೇವೆಗಳ ನಿರ್ವಹಣೆಯ ಬಗ್ಗೆ ಯೋಗಿ ಆದಿತ್ಯನಾಥ್ ಸರಕಾರವನ್ನು ಶ್ಲಾಘಿಸಿದರು. ಪ್ರತಿ ಸರಕಾರವು ಆಡಳಿತ ವಿರೋಧಿ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ, ಆದಿತ್ಯನಾಥ್ ಸರಕಾರದ ಪರವಾದ ಮನಸ್ಥಿತಿ ಹೆಚ್ಚು ಪ್ರಬಲವಾಗಿದೆ ಎಂದು ಶಾ ಹೇಳಿದ್ದಾರೆಂದು ತಿಳಿದುಬಂದಿದೆ.