ಅಗತ್ಯವಿದ್ದರೆ ಎರಡು ದಿನ ಲಾಕ್ಡೌನ್ ಘೋಷಿಸಿ: ದಿಲ್ಲಿ ವಾಯು ಮಾಲಿನ್ಯ ಬಗ್ಗೆ ಸುಪ್ರೀಂಕೋರ್ಟ್

Photo: PTI
ಹೊಸದಿಲ್ಲಿ: ದಿಲ್ಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವು ಜನರು ತಮ್ಮ ಮನೆಗಳಲ್ಲಿಯೂ ಕೂಡ ಮಾಸ್ಕ್ ಗಳನ್ನು ಧರಿಸುವಂತೆ ಮಾಡಿದೆ ಎಂದು ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸುತ್ತಿರುವಾಗ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದ್ದಾರೆ.
ದಿಲ್ಲಿ-ಎನ್ಸಿಆರ್ ಅನ್ನು ಆವರಿಸಿರುವ ತೀವ್ರ ವಾಯು ಮಾಲಿನ್ಯವನ್ನು ಭಾರತದ ಸುಪ್ರೀಂ ಕೋರ್ಟ್ ಶನಿವಾರ ಗಂಭೀರವಾಗಿ ಪರಿಗಣಿಸಿದ್ದು ವಾಹನಗಳು, ಪಟಾಕಿಗಳು, ಕೈಗಾರಿಕೆಗಳು ಹಾಗೂ ಧೂಳಿನಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸಲು ಎರಡು ದಿನಗಳ ಲಾಕ್ಡೌನ್ ಘೋಷಿಸಿ ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ದಿಲ್ಲಿ-ಎನ್ಸಿಆರ್ನಲ್ಲಿ ಮಾಲಿನ್ಯವನ್ನು ಪ್ರಸ್ತುತ "ತೀವ್ರ" ಮಟ್ಟದಿಂದ ತಗ್ಗಿಸಲು ಕೆಲವು ತಕ್ಷಣದ ಕ್ರಮಗಳನ್ನು ಪರಿಗಣಿಸುವಂತೆ ನ್ಯಾಯಾಲಯವು ಸರಕಾರಕ್ಕೆ ತಿಳಿಸಿದೆ.
"ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದು ನೀವೇ ನೋಡಿ.... ನಮ್ಮ ಮನೆಗಳಲ್ಲಿಯೂ ಸಹ ನಾವು ಮಾಸ್ಕ್ ಗಳನ್ನು ಧರಿಸಿದ್ದೇವೆ" ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಸೋಮವಾರದೊಳಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ತಿಳಿಸಿದ ಮುಖ್ಯ ನ್ಯಾಯಮೂರ್ತಿ ರಮಣ, "ತುರ್ತು ಕ್ರಮಗಳನ್ನು ಹೇಗೆ ತೆಗೆದುಕೊಳ್ಳಲು ನೀವು ಯೋಜಿಸುತ್ತೀರಿ ಎಂದು ನಮಗೆ ತಿಳಿಸಿ? ಎರಡು ದಿನಗಳ ಲಾಕ್ಡೌನ್ ಸಾಧ್ಯವೇ ? ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) ಮಟ್ಟವನ್ನು ಕಡಿಮೆ ಮಾಡುವ ನಿಮ್ಮ ಯೋಜನೆ ಏನು? ಎಂದು ಕೇಳಿದರು.
ಕೇಂದ್ರ ಮತ್ತು ರಾಜ್ಯಗಳ ನಡುವೆ ಇಂದು ತುರ್ತು ಸಭೆ ನಡೆಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.