ಪ್ರಧಾನಿಯ ನ.15ರ ರ್ಯಾಲಿಯಲ್ಲಿ ಭಾಗವಹಿಸುವ ವಾಹನಗಳಿಗೆ ಟೋಲ್ ವಿನಾಯಿತಿ ಘೋಷಿಸಿದ ಮ.ಪ್ರ. ಸರಕಾರ

ಪ್ರಧಾನಿ ನರೇಂದ್ರ ಮೋದಿ (File Photo: PTI)
ಭೋಪಾಲ್: ನವೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ 'ಜನಜಾತೀಯ ಗೌರವ್ ದಿವಸ್' ಆದಿವಾಸಿ ಸಮ್ಮೇಳನಕ್ಕೆ ಹಾಜರಾಗಲು ಭೋಪಾಲ್ಗೆ ಆಗಮಿಸಲಿರುವ ವಾಹನಗಳಿಗೆ ಟೋಲ್ ಪಾವತಿಯಿಂದ ವಿನಾಯಿತಿ ನೀಡಲು ಮಧ್ಯಪ್ರದೇಶ ಸರಕಾರ ನಿರ್ಧರಿಸಿದೆ ಎಂದು PTI ವರದಿ ಮಾಡಿದೆ.
ನಗರದ ಜಂಬೋರಿ ಮೈದಾನದಲ್ಲಿ ನಡೆಯಲಿರುವ ರ್ಯಾಲಿಗೆ ಆಗಮಿಸುವ ಆದಿವಾಸಿಗಳನ್ನು ಕರೆತರುವ ಬಸ್ಸುಗಳಲ್ಲಿ ಮೆಕ್ಯಾನಿಕ್ಗಳೂ ಇರಲಿದ್ದು, ಒಂದು ವೇಳೆ ಪ್ರಯಾಣದ ವೇಳೆ ಬಸ್ಸುಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದರೆ ತಕ್ಷಣ ದುರಸ್ತಿ ಪಡಿಸಲು ಇವರು ನೆರವಾಗಲಿದ್ದಾರೆ.
ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ವಾಹನಗಳ ಜತೆಗೆ ಅಂಬುಲೆನ್ಸ್ಗಳೂ ಇರಬೇಕೆಂದು ಸರಕಾರ ಹೇಳಿದ್ದು ಬಸ್ಸುಗಳ ಚಾಲಕರಿಗೆ ಬ್ರೀತ್-ಅನೈಲಸರ್ ಪರೀಕ್ಷೆಗಳನ್ನೂ ನಡೆಸಲಾಗುವುದು.
ಈ ಕಾರ್ಯಕ್ರಮದ ಏರ್ಪಾಟುಗಳ ಕುರಿತಂತೆ ಚರ್ಚಿಸಲು ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಹಿಸಿದ್ದರು.
ನವೆಂಬರ್ 15 ತಾರೀಕನ್ನು 'ಜನಜಾತೀಯ ಗೌರವ್ ದಿವಸ್' ಎಂದು ಆಚರಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಬುಧವಾರ ಘೋಷಿಸಿತ್ತು. ಆದಿವಾಸಿ ನಾಯಕ ಬಿರ್ಸಾ ಮುಂಡಾ ಅವರ ಜನ್ಮದಿನಾಚರಣೆಯ ಸ್ಮಾರಕವಾಗಿ ಹಾಗೂ ಭಾರತದ ಇತಿಹಾಸ ಮತ್ತು ಸಂಸ್ಕೃತಿಗೆ ಪರಿಶಿಷ್ಟ ಪಂಗಡಗಳ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುವುದು.
ಭೋಪಾಲದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಂದಾಜು 2.5 ಲಕ್ಷ ಆದಿವಾಸಿಗಳು ಭಾಗವಹಿಸಬಹುದೆಂಬ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿದೆ. ಈ ಕಾರ್ಯಕ್ರಮಕ್ಕೆ ಎಷ್ಟು ವೆಚ್ಚ ತಗಲಬಹುದು ಎಂಬ ಕುರಿತು ಸರಕಾರ ಮೌನ ವಹಿಸಿದೆಯಾದರೂ ಆರೋಗ್ಯ, ಶಿಕ್ಷಣ ಮತ್ತು ಆದಿವಾಸಿಗಳ ಅಭಿವೃದ್ಧಿಗಾಗಿ ಮೀಸಲಿರಿಸಲಾದ ಹಣವನ್ನು ಮುಖ್ಯಮಂತ್ರಿ ಚೌಹಾಣ್ ಅವರು ಪ್ರಧಾನಿ ಮೋದಿ ಅವರ ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಆದಿವಾಸಿ ನಾಯಕ ಹೀರಾಲಾಲ್ ಅಲಾವ ಆರೋಪಿಸಿದ್ದಾರೆ.







