ಈ ವರ್ಷ 5 ರಾಜ್ಯಗಳ ಅಸೆಂಬ್ಲಿ ಚುನಾವಣೆಗೆ 252 ಕೋಟಿ ರೂ. ವ್ಯಯಿಸಿದ ಬಿಜೆಪಿ: ವರದಿ
ಪಶ್ಚಿಮ ಬಂಗಾಳವೊಂದರಲ್ಲಿ 151 ಕೋ.ರೂ. ಖರ್ಚು

ಹೊಸದಿಲ್ಲಿ: ಈ ವರ್ಷ ಅಸ್ಸಾಂ, ಪುದುಚೇರಿ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 252 ಕೋಟಿ ರೂಪಾಯಿ ಖರ್ಚು ಮಾಡಿದ್ದು, ತೃಣಮೂಲ ಕಾಂಗ್ರೆಸ್ ಆಡಳಿತದ ಪಶ್ಚಿಮಬಂಗಾಳ ರಾಜ್ಯದಲ್ಲಿ ಪ್ರಚಾರಕ್ಕಾಗಿ ಸುಮಾರು 60 ಪ್ರತಿಶತ ಹಣವನ್ನು ಬಳಸಲಾಗಿದೆ.
ಚುನಾವಣಾ ಸಮಿತಿಗೆ ಸಲ್ಲಿಸಿದ ಚುನಾವಣಾ ವೆಚ್ಚದ ವಿವರದ ಪ್ರಕಾರ, ಬಿಜೆಪಿ ಖರ್ಚು ಮಾಡಿರುವ 252 ಕೋ. ರೂ.ಗಳಲ್ಲಿ ಅಸ್ಸಾಂ ಚುನಾವಣೆಗೆ 43.81 ಕೋಟಿ ರೂ. ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆಗೆ 4.79 ಕೋಟಿ ರೂ.ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ.
ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತನ್ನ ಕಟ್ಟಾ ಎದುರಾಳಿ ಎಐಎಡಿಎಂಕೆಯಿಂದ ಅಧಿಕಾರವನ್ನು ಕಸಿದುಕೊಂಡಿದ್ದು, ಕೇವಲ ಶೇ.2.6ರಷ್ಟು ಮತಗಳನ್ನು ಪಡೆದ ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕಾಗಿ 22.97 ಕೋಟಿ ರೂ.ಖರ್ಚು ಮಾಡಿತ್ತು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ವಿರುದ್ಧದ ಪ್ರಚಾರದಲ್ಲಿ ಬಿಜೆಪಿ ಸಂಪೂರ್ಣ ಬಲ ಪ್ರಯೋಗಿಸಿದ್ದು, ಈ ರಾಜ್ಯದಲ್ಲಿ 151 ಕೋಟಿ ರೂ. ಖರ್ಚು ಮಾಡಿತ್ತು.
ಕೇರಳದಲ್ಲಿ ಹಾಲಿ ಎಲ್‌ಡಿಎಫ್ ಅಧಿಕಾರ ಉಳಿಸಿಕೊಂಡಿದ್ದು, ಈ ರಾಜ್ಯದಲ್ಲಿ ಬಿಜೆಪಿ 29.24 ಕೋಟಿ ರೂ. ವ್ಯಯಿಸಿದೆ.







