ಮಣಿಪುರ: ಭಯೋತ್ಪಾದಕರ ಹೊಂಚುದಾಳಿಯಲ್ಲಿ ಸೇನೆಯ ಕರ್ನಲ್, ನಾಲ್ವರು ಯೋಧರು ಸೇರಿದಂತೆ 7 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ (ndtv)
ಇಂಫಾಲ, ನ.13: ಮಣಿಪುರದ ಚುರಾಚಂದ್ಪುರ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್ ಪಡೆಯ ವಾಹನದ ಮೇಲೆ ಉಗ್ರಗಾಮಿಗಳು ಶನಿವಾರ ದಾಳಿ ನಡೆಸಿ, ಭಾರತೀಯ ಸೇನಾಪಡೆಯ ಕರ್ನಲ್, ಅವರ ಪತ್ನಿ, ಪುತ್ರ ಮತ್ತು ನಾಲ್ವರು ಯೋಧರನ್ನು ಹತ್ಯೆಗೈದಿದ್ದಾರೆ.
ಮ್ಯಾನ್ಮಾರ್ ಗಡಿಗೆ ತಾಗಿಕೊಂಡಿರುವ ಸೆಹ್ಕಾನ್ ಗ್ರಾಮದ ಬಳಿ ಬೆಳಗ್ಗೆ 10 ಗಂಟೆಯ ವೇಳೆಗೆ ಈ ದಾಳಿ ನಡೆದಿದೆ. ಆದರೆ ಈವರೆಗೆ ಯಾವುದೇ ಉಗ್ರಗಾಮಿ ಗುಂಪು ದಾಳಿಯ ಹೊಣೆಯನ್ನು ವಹಿಸಿಕೊಂಡಿಲ್ಲ.
ದಾಳಿಯಲ್ಲಿ ಮೃತಪಟ್ಟ ಸೇನಾಧಿಕಾರಿ ಕರ್ನಲ್ ವಿಜಯ್ ತ್ರಿಪಾಠಿ ಅವರು 46 ಅಸ್ಸಾಂ ರೈಫಲ್ಸ್ನ ಕಮಾಂಡಿಂಗ್ ಅಧಿಕಾರಿಯಾಗಿದ್ದಾರೆ.ಅವರು ಬೆಹಿಯಾಂಗ್ನಲ್ಲಿರುವ ಸೇನಾ ಠಾಣೆಯಿಂದ ಪತ್ನಿ ಹಾಗೂ ಒಂಭತ್ತು ವರ್ಷದ ಪುತ್ರನ ಜೊತೆಗೆ ಬೇಸ್ ಕ್ಯಾಂಪ್ಗೆ ಮರಳುತ್ತಿದ್ದಾಗ ಅವರಿದ್ದ ವಾಹನ ವ್ಯೂಹದ ಮೇಲೆ ಶಂಕಿತ ಪಿಆರ್ಇಪಿಎಕೆ/ ಪಿಎಲ್ಎ ಉಗ್ರರು ಸುಧಾರಿತ ಸ್ಫೋಟಕ ಸಾಧನ (ಐಇಡಿ)ದಿಂದ ದಾಳಿ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
ಆನಂತರ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಲ್ ವಿಜಯ್ ತ್ರಿಪಾಠಿ,ಅವರ ಪತ್ನಿ ಹಾಗೂ 6 ವರ್ಷದ ಪುತ್ರ ಮತ್ತು ನಾಲ್ವರು ಕ್ಷಿಪ್ರ ಕಾರ್ಯಾಚರಣೆ ಪಡೆಯ ಯೋಧರು ಸಾವನ್ನಪ್ಪಿದರು. ಗಾಯಗೊಂಡ ಇತರ ಯೋಧರು ಬೆಹಿಯಾಂಗಾದ ಆರೋಗ್ಯ ಪಾಲನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಅಸ್ಸಾಂ ರೈಫಲ್ಸ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿಯ ಬಳಿಕ ಉಗ್ರರು ಪರಾರಿಯಾಗಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಉಗ್ರರ ದಾಳಿಯಲ್ಲಿ ಮರಣವನ್ನಪ್ಪಿದವರ ಶೋಕತಪ್ತ ಕುಟುಂಬಗಳಿಗೆ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ತನ್ನ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ. ಮಣಿಪುರದ ಚುರಾಚಂದ್ಪುರದಲ್ಲಿರುವ ಅಸ್ಸಾಂ ರೈಫಲ್ಸ್ ಪಡೆಯ ವಾಹನವ್ಯೆಹದ ಮೇಲೆ ನಡೆದ ಹೇಡಿಯುತವಾದ ದಾಳಿಯು ತೀವ್ರ ವೇದನಾಕಾರಿಯಾಗಿದೆ ಹಾಗೂ ಖಂಡನೀಯ ಎಂದವರು ಟ್ವೀಟ್ ಮಾಡಿದ್ದಾರೆ.
ತ್ರಿಪುರಾದಲ್ಲಿ ಸಕ್ರಿಯವಾಗಿರುವ ಪೀಪಲ್ಸ್ ರೆವೆಲ್ಯೂಶನರಿ ಪಾರ್ಟಿ ಆಫ್ ಕಾಂಗ್ಲೆಯಿಪಾಕ್ (ಪಿಆರ್ಇಪಿಎಕೆ) ಅಥವಾ ಪೀಪಲ್ಸ್ ಲಿಬರೇಶನ್ ಆರ್ಮಿ ಎಂಬ ಪ್ರತ್ಯೇಕತವಾದಿ ಉಗ್ರಗಾಮಿ ಗುಂಪು ಈ ದಾಳಿಯನ್ನು ನಡೆಸಿದೆಯೆಂದು ಶಂಕಿಸಲಾಗಿದೆ. ಆದಾಗ್ಯೂ ಈ ತನಕ ಯಾವುದೇ ಸಂಘಟನೆ ದಾಳಿಯ ಹೊಣೆ ವಹಿಸಿಕೊಂಡಿಲ್ಲವೆಂದು ತಿಳಿದುಬಂದಿದೆ.. ಈ ಬಂಡುಕೋರ ಗುಂಪು ನವೆಂಬರ್ 12/13 ದಿನಾಂಕಗಳನ್ನು ‘ಪಿಆರ್ಇಪಿಎಕೆ’ ಸಂಸ್ಮರಣಾ ದಿನವಾಗಿ ಆಚರಿಸುವುದರಿಂದ, ಆ ಸಂದರ್ಭದಲ್ಲೇ ಅದು ದಾಳಿ ನಡೆಸಿದೆಯೆನ್ನಲಾಗಿದೆ.