ಗುಜರಾತ್: ವಡೋದರಾದ ಆಹಾರ ಸ್ಟಾಲ್ ಗಳಲ್ಲಿ ಎಲ್ಲರಿಗೆ ಕಾಣುವಂತೆ ಮಾಂಸಾಹಾರ ಇಡುವಂತಿಲ್ಲ !

ವಡೋದರಾ: ಗುಜರಾತ್‌ನ ವಡೋದರಾದಲ್ಲಿ ಮಾಂಸಾಹಾರವನ್ನು ಎಲ್ಲರಿಗೂ ಕಾಣುವಂತೆ ಇರಿಸಿ ಮಾರಾಟ ಮಾಡುವ ಬೀದಿ ಬದಿ ಆಹಾರ ಸ್ಟಾಲುಗಳ ವಿರುದ್ಧ ಅಲ್ಲಿನ ಸ್ಥಳೀಯಾಡಳಿತ ಕ್ರಮ ಕೈಗೊಳ್ಳಲು ಸಜ್ಜಾಗಿದೆ. ಬೀದಿ ಬದಿ ಸ್ಟಾಲುಗಳು ಮಾಂಸಾಹಾರ ಮಾರಾಟ ಮಾಡಬಹುದಾದರೂ ಮಾಂಸವನ್ನು ಮುಚ್ಚಿಡಬೇಕು, ಮೊಟ್ಟೆ ಖಾದ್ಯಗಳನ್ನು ಸಿದ್ಧಪಡಿಸುವ ಸ್ಟಾಲುಗಳೂ ಇದೇ ರೀತಿ ಕ್ರಮಕೈಗೊಳ್ಳಬೇಕಿದೆ ಎಂದು ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ರಾಜಕೋಟ್ ಮೇಯರ್ ಕೂಡ ಇಂತಹುದೇ ಒಂದು ಆದೇಶ ಹೊರಡಿಸಿ ಮಾಂಸಾಹಾರ ಮಾರಾಟ ಮಾಡುವ ಸ್ಟಾಲುಗಳು ನಿಗದಿತ ಸ್ಥಳಗಳಲ್ಲಿಯೇ ಇರಬೇಕು ಹಾಗೂ ಮುಖ್ಯ ರಸ್ತೆಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ.
ವಡೋದರಾ ಮುನಿಸಿಪಲ್ ಕಾರ್ಪೊರೇಷನ್ ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಂದ್ರ ಪಟೇಲ್ ಅವರು ಮಾಂಸಾಹಾರ ಸ್ಟಾಲ್‌ಗಳ ಕುರಿತಂತೆ ಮೌಖಿಕ ಆದೇಶವನ್ನಷ್ಟೇ ನೀಡಿದ್ದಾರೆ. ದಾರಿಯಲ್ಲಿ ಸಾಗುವವರಿಗೆ ಯಾವುದೇ ಮಾಂಸಾಹಾರ ವಸ್ತು ಕಾಣಬಾರದು. ಇದು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದೆ. ಮಾಂಸಾಹಾರ ಖಾದ್ಯಗಳನ್ನು ಎಲ್ಲರಿಗೂ ಕಾಣುವಂತೆ ಮಾರಾಟ ಮಾಡುವ ಪದ್ಧತಿ ಇದ್ದಿರಬಹುದು ಆದರೆ ಈಗ ಅದನ್ನು ಸರಿಪಡಿಸುವ ಸಮಯ ಬಂದಿದೆ,'' ಎಂದು ಅವರು ಹೇಳಿದ್ದಾರೆ.