ನಾನು ಮಂತ್ರಿಯಾಗಿರುವವರೆಗೂ ನನ್ನ ಮಗ ಶಾಸಕನಾಗುವುದು ಬೇಡ: ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಾನು ಮಂತ್ರಿಯಾಗಿರುವವರೆಗೂ ನನ್ನ ಮಗ ಕಾಂತೇಶ್ ಶಾಸಕನಾಗುವುದು ಬೇಡ ಎಂಬ ವೈಯಕ್ತಿಕ ತೀರ್ಮಾನ ನನ್ನದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾವು ಮಂತ್ರಿಯಾಗಿರುವವರೆಗೆ ತಮ್ಮ ಪುತ್ರ ಕಾಂತೇಶ್ ಅವರನ್ನು ಎಂಎಲ್ ಸಿ ಯಾಗಲಿ ಅಥವಾ ಎಂಎಲ್‌ಎಗಾಗಲಿ ಸ್ಪರ್ಧಿಸಬಾರದೆಂದು ನಿರ್ಧಾರ ಕೈಗೊಂಡಿದ್ದೇನೆ. ಹಾಗಾಗಿ ಕಾಂತೇಶ್ ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ವಿಷಯವನ್ನು ನಾನು ದೆಹಲಿಯಿಂದ ಬಂದ ನಿಯೋಗದವರಿಗೆ ರಾಜ್ಯ ಬಿಜೆಪಿ ಕೋರ್ ಕಮಿಟಿಯವರಿಗೆ ತಿಳಿಸಿದ್ದೇನೆ ಎಂದರು.
ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ವಿಧಾನ ಪರಿಷತ್ ಚುನಾವಣೆ ಬಂದಿದೆ. 25 ಕ್ಷೇತ್ರದಲ್ಲಿ ಈ ಚುನಾವಣೆ ನಡೆಯಲಿದ್ದು, ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಕೋರ್ ಕಮಿಟಿಗೆ ನೀಡಿದ್ದಾರೆ. ಈ ಪಟ್ಟಿ ಕೇಂದ್ರ ನಾಯಕರ ಕೈ ಸೇರಲಿದ್ದು, ಇನ್ನೆರಡು ದಿನಗಳಲ್ಲಿ ಅಂತಿಮ ಹೆಸರನ್ನು ಪ್ರಕಟಿಸುವ ನಿರೀಕ್ಷೆ ಇದೆ ಎಂದರು.





