ಸಾಗರ: ವಾಂತಿ, ಭೇದಿ; 150ಕ್ಕೂ ಅಧಿಕ ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಸಾಗರ, ನ.13: ಜೋಗ, ಕಾರ್ಗಲ್, ಲಿಂಗನಮಕ್ಕಿ ಸುತ್ತ್ತಮುತ್ತ 150ಕ್ಕೂ ಹೆಚ್ಚುಮಂದಿ ದಿಢೀರ್ ಅಸ್ವಸ್ಥಗೊಂಡಿದ್ದಾರೆ.ಎಲ್ಲರಲ್ಲೂ ವಾಂತಿ, ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜನರು ದಿಢೀರ್ ಅಸ್ವಸ್ಥಗೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ.ಆಹಾರ ಮತ್ತು ನೀರಿನ ಸಮಸ್ಯೆ ಉಂಟಾಗಿ ಈ ರೀತಿಯಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಶುಕ್ರವಾರ ಬೆಳಿಗ್ಗೆಯಿಂದಲೇ ಜನರು ದಿಢೀರ್ ಅಸ್ವಸ್ಥಗೊಂಡು ಕಾರ್ಗಲ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.ಹೆಚ್ಚುವರಿ ಚಿಕಿತ್ಸೆ ಅಗತ್ಯ ಇದ್ದವರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ವಿಚಾರ ತಿಳಿಯುತ್ತಿದ್ದಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಎಸ್ ಮೋಹನ್ ಅವರು ಹೆಚ್ಚುವರಿ ವೈದ್ಯರು ಮತ್ತು ಅಗತ್ಯ ಔಷಧವನ್ನು ಕಾರ್ಗಲ್ ಆಸ್ಪತ್ರೆಗೆ ಒದಗಿಸಿದ್ದಾರೆ.
ಘಟನೆಗೆ ಕಾರಣವೇನು?
ಜೋಗ, ಕಾರ್ಗಲ್‌ನಲ್ಲಿ ಎರಡು ದಿನದ ಹಿಂದೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವರು ಅಸ್ವಸ್ಥಗೊಂಡಿದ್ದಾರೆ.ಇನ್ನು,ಡಾಬಾ ಒಂದರಲ್ಲಿ ಊಟ ಮಾಡಿದ 12 ಮಂದಿಯಲ್ಲೂ ವಾಂತಿ,ಭೇದಿ,ಹೊಟ್ಟೆ ನೋವು ಕಾಣಿಸಿಕೊಂಡಿದೆ.ಹಾಗಾಗಿ ಆಹಾರದಲ್ಲಿ ವ್ಯತ್ಯಾಸವಾಗಿರಬೇಕು ಅಥವಾ ನೀರಿನಲ್ಲಿ ಸಮಸ್ಯೆಯಾಗಿರುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಚಿಕಿತ್ಸೆಗೆ ಸಕಲ ವ್ಯವಸ್ಥೆ:
ಮಾಧ್ಯಮಗಳ ಜೊತೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಎಸ್ ಮೋಹನ್ ಅವರು, ಅಗತ್ಯ ಚಿಕಿತ್ಸೆ ಒದಗಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.ಕಾರ್ಗಲ್ ಮತ್ತು ಸಾಗರ ಆಸ್ಪತ್ರೆಗಳಲ್ಲಿ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಗಲ್ ಆಸ್ಪತ್ರೆಯಲ್ಲಿ ಬಂದು ಹಲವರು ಚಿಕಿತ್ಸೆ ಪಡೆದಿದ್ದಾರೆ.15 ಜನರು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.ಹಲವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.ಕಾರ್ಗಲ್ ಆಸ್ಪತ್ರೆಗೆ ಇಬ್ಬರು ಹೆಚ್ಚುವರಿ ವೈದ್ಯರನ್ನು ನಿಯೋಜಿಸಲಾಗಿದೆ.ನರ್ಸಿಂಗ್ ಸಿಬ್ಬಂದಿ,ಹೆಚ್ಚುವರಿ ಇಂಜೆಕ್ಷನ್,ಔಷಧವನ್ನು ಒದಗಿಸಲಾಗಿದೆ.ತುರ್ತು ಸಂದರ್ಭ ರೋಗಿಗಳನ್ನು ಸಾಗರ ಆಸ್ಪತ್ರೆಗೆ ಕರೆದೊಯ್ಯಲು ಎರಡು ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.







