ಯೋಧರ ತ್ಯಾಗ ಎಂದಿಗೂ ಮರೆಯಲಾಗದು: ಅಸ್ಸಾಂ ರೈಫಲ್ಸ್ ಮೇಲೆ ಭಯೋತ್ಪಾದಕ ದಾಳಿಗೆ ಪ್ರಧಾನಿ ಪ್ರತಿಕ್ರಿಯೆ
ಮೋದಿ ಸರಕಾರಕ್ಕೆ ರಾಷ್ಟ್ರ ರಕ್ಷಿಸುವ ಸಾಮರ್ಥ್ಯವಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು: ಕಾಂಗ್ರೆಸ್ ವಾಗ್ದಾಳಿ

ಹೊಸದಿಲ್ಲಿ: ಮಣಿಪುರದ ಚುರಾಚನ್‌ಪುರದಲ್ಲಿ ಶನಿವಾರ ನಡೆದ ಭಯೋತ್ಪಾದಕರ ಹೊಂಚು ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಕರ್ನಲ್, ಅವರ ಪತ್ನಿ ಹಾಗೂ ಎಂಟು ವರ್ಷದ ಮಗ ಮತ್ತು ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಮಣಿಪುರದ ಮ್ಯಾನ್ಮಾರ್ ಗಡಿಯಲ್ಲಿ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ "ಯೋಧರ ತ್ಯಾಗವನ್ನು ಎಂದಿಗೂ ಮರೆಯಲಾಗದು" ಎಂದು ಹೇಳಿದರು.
46 ಅಸ್ಸಾಂ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ವಿಪ್ಲವ್ ತ್ರಿಪಾಠಿ, ಶನಿವಾರ ಫಾರ್ವರ್ಡ್ ಕ್ಯಾಂಪ್‌ಗೆ ಹೋಗಿದ್ದರು ಹಿಂದಿರುಗುತ್ತಿದ್ದಾಗ ಅವರ ಬೆಂಗಾವಲು ಪಡೆ ಮೇಲೆ ಉಗ್ರರು ಹೊಂಚು ದಾಳಿ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಘಟನಾ ಪ್ರದೇಶದಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ನ್ಯಾಯ ದೊರಕಿಸಿಕೊಡಲಾಗುವುದು. ಭಯೋತ್ಪಾದಕರನ್ನು ಪತ್ತೆಹಚ್ಚಲು ರಾಜ್ಯ ಪಡೆಗಳು ಹಾಗೂ ಅರೆಸೇನಾ ಪಡೆಗಳು ಈಗಾಗಲೇ ಕಾರ್ಯ ನಿರತವಾಗಿವೆ ಎಂದು ಮಣಿಪುರ ಮುಖ್ಯಮಂತ್ರಿ ಬೀರೇನ್ ಸಿಂಗ್ ಹೇಳಿದರು.
ಮೋದಿ ಸರಕಾರಕ್ಕೆ ರಾಷ್ಟ್ರ ರಕ್ಷಿಸುವ ಸಾಮರ್ಥ್ಯವಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು: ಕಾಂಗ್ರೆಸ್ ವಾಗ್ದಾಳಿ
ದಾಳಿಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. “ಮಣಿಪುರದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯು ಮೋದಿ ಸರಕಾರಕ್ಕೆ ರಾಷ್ಟ್ರವನ್ನು ರಕ್ಷಿಸುವ ಸಾಮರ್ಥ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕೃತ್ಯದಲ್ಲಿ ಮೃತಪಟ್ಟವರಿಗೆ ಹಾಗೂ ಅವರ ಕುಟುಂಬಗಳಿಗೆ ಸಂತಾಪಗಳು. ರಾಷ್ಟ್ರವು ನಿಮ್ಮ ತ್ಯಾಗವನ್ನು ಸ್ಮರಿಸುತ್ತದೆ" ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.