ಆಝಂಗಡ ಹೆಸರನ್ನು ಆರ್ಯಂಗಢ ಎಂದು ಬದಲಾಯಿಸುವ ಸುಳಿವು ನೀಡಿದ ಆದಿತ್ಯನಾಥ್
ಹೆಸರು, ಬಣ್ಣ ಬದಲಾಯಿಸುವ ಬಿಜೆಪಿಯನ್ನು ಜನರು ಬದಲಾಯಿಸುತ್ತಾರೆಂದ ಅಖಿಲೇಶ್ ಯಾದವ್

ಲಕ್ನೊ: ಆಝಂಗಢ ಹೆಸರನ್ನು 'ಆರ್ಯಂಗಢ' ಎಂದು ಬದಲಾಯಿಸುವ ಸಾಧ್ಯತೆಯಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸುಳಿವು ನೀಡಿದ್ದಾರೆ.
ಆದಿತ್ಯನಾಥ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಆಝಂಗಢದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.
ಇಂದು ಶಂಕುಸ್ಥಾಪನೆ ಮಾಡಿರುವ ವಿಶ್ವವಿದ್ಯಾನಿಲಯವು ಆಝಂಗಢವನ್ನು ನಿಜವಾದ ಆರ್ಯಂಗಢವನ್ನಾಗಿ ಮಾಡುತ್ತದೆ. ಈಗ ಅದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಆದಿತ್ಯನಾಥ್ ವಿಶ್ವವಿದ್ಯಾನಿಲಯದ ಶಂಕುಸ್ಥಾಪನೆ ವೇಳೆ ಟ್ವೀಟ್ ಮಾಡಿದ್ದಾರೆ.
ಆದಿತ್ಯನಾಥ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಗರಗಳ ಹೆಸರನ್ನು ಮರುನಾಮಕರಣ ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷವು ಆರೋಪಿಸುತ್ತಿದೆ.
ಆಝಂಗಢದ ಹೆಸರು ಬದಲಾವಣೆ ಯೋಜನೆ ಕುರಿತು 'ಇಂಡಿಯಾ ಟುಡೇ' ಟಿವಿಯೊಂದಿಗೆ ಮಾತನಾಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್,"ಅಮಿತ್ ಶಾ ಹಾಗೂ ಆದಿತ್ಯನಾಥ್ ಆಝಂಗಢದ ಅಭಿವೃದ್ಧಿಯನ್ನು ನೋಡಲು ಹೋಗಿದ್ದಾರೆ. 4.5 ವರ್ಷಗಳ ನಂತರವೂ ಸಿಎಂ ಅಲ್ಲಿ ತಮ್ಮ ಯಾವುದೇ ಕಾಮಗಾರಿಯನ್ನು ಉದ್ಘಾಟಿಸಲಿಲ್ಲ. ಅವರ ಮಾತನ್ನು ಯಾರೂ ನಂಬುವುದಿಲ್ಲ. ಸಿಎಂಗೆ ಹೆಸರು ಹಾಗೂ ಬಣ್ಣವನ್ನು ಹೇಗೆ ಬದಲಾಯಿಸುವುದು ಎಂದು ಮಾತ್ರ ತಿಳಿದಿದೆ. ಆದರೆ ಈ ಬಾರಿ ಜನರು ಬಿಜೆಪಿ ಸರಕಾರವನ್ನು ಬದಲಾಯಿಸುವಷ್ಟು ಮತ ಹಾಕುತ್ತಾರೆ" ಎಂದು ಅಖಿಲೇಶ್ ಯಾದವ್ ಹೇಳಿದರು.
आज जिस विश्वविद्यालय की आधारशिला रखी गयी है, यह विश्वविद्यालय 'आजमगढ़' को सचमुच ''आर्यमगढ़'' बना ही देगा, इसमें अब कोई संदेह होना ही नहीं चाहिए। pic.twitter.com/OgwQVUwqp9
— Yogi Adityanath (@myogiadityanath) November 13, 2021







