ಬಿಟ್ ಕಾಯಿನ್ ಹಗರಣ: ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ

photo: twitter@CMofKarnataka
ಬೆಂಗಳೂರು, ನ. 13: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ `ಬಿಟ್ ಕಾಯಿನ್ ಹಗರಣ' ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
`ಬಿಟ್ ಕಾಯಿನ್ ಹಗರಣ' ಸಂಬಂಧ ಆರೋಪಿ ಶ್ರೀಕಿ ಯಾನೆ ಶ್ರೀಕೃಷ್ಣ ಎಂಬವನನ್ನು ಬಂಧಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಮಧ್ಯೆ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಮಧ್ಯೆ ಈ ಪ್ರಕರಣ ಸಂಬಂಧ ಆರೋಪ-ಪ್ರತ್ಯಾರೋಪ ನಡೆಯುತ್ತಿದ್ದು, ಕೆಲ ರಾಜಕೀಯ ಮುಖಂಡರು ಮತ್ತವರ ಮಕ್ಕಳ ಹೆಸರುಗಳು ಪ್ರಕರಣದಲ್ಲಿ ಕೇಳಿಬರುತ್ತಿದ್ದು, ಹಲವು ಸಂಶಯಗಳನ್ನು ಸೃಷ್ಟಿಸಿದೆ.
ಶನಿವಾರ ಇಲ್ಲಿನ ರೇಸ್ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಟ್ ಕಾಯಿನ್ ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ಪ್ರಕರಣದ ತನಿಖೆ ಯಾವ ಹಂತದಲ್ಲಿದೆ? ಪ್ರತಿಪಕ್ಷಗಳ ಆರೋಪಗಳೇನು? ಮತ್ತು ಪ್ರಕರಣ ಸಂಬಂಧ ದಾಖಲೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಗೊತ್ತಾಗಿದೆ.
`ಬಿಟ್ ಕಾಯಿನ್ ಹಗರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಹಗರಣದ ಬಗ್ಗೆ ಮಾತನಾಡುವವರು ನಿಖರವಾಗಿ ತಿಳಿದುಕೊಳ್ಳಲಿ. ಈ ಸಂಬಂಧ ಯಾವುದೇ ದಾಖಲೆಗಳಿದ್ದರೆ ಕೂಡಲೇ ತನಿಖಾ ಸಂಸ್ಥೆಗಳಿಗೆ ನೀಡಲಿ. ಈಗಾಗಲೇ ಪ್ರಕರಣವನ್ನು ಜಾರಿ ನಿರ್ದೇಶನಾಲಯ(ಈಡಿ)ಕ್ಕೆ ಹಸ್ತಾಂತರ ಮಾಡಲಾಗಿದೆ. ಇದೊಂದು ಅಂತರ್ರಾಷ್ಟ್ರಿಯ ವಿಷಯವಾಗಿದ್ದು, ಸಿಬಿಐ ಮತ್ತು ಇಂಟರ್ಪೋಲ್ ವಿಭಾಗಕ್ಕೂ ಮಾಹಿತಿ ನೀಡಲಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.
`ಈ ಪ್ರಕರಣದಲ್ಲಿ ನಾವು ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ನಾವು ಯಾರೂ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಯಾರೇ ತಮ್ಮ ಬಳಿ ಈ ಪ್ರಕರಣ ಸಂಬಂಧ ಮಾಹಿತಿ ಇದ್ದರೆ ಕೂಡಲೇ ತನಿಖಾ ಸಂಸ್ಥೆಗಳಿಗೆ ನೀಡಬೇಕು. ತನಿಖಾ ಸಂಸ್ಥೆಗಳ ತನಿಖೆ ಬಳಿಕ ಸತ್ಯಾಂಶ ಗೊತ್ತಾಗಲಿದೆ. ರಾಜಕೀಯಪ್ರೇರಿತ ಹೇಳಿಕೆಗಳಿಂದ ಏನೂ ಆಗುವುದಿಲ್ಲ' ಎಂದು ಬಸವರಾಜ ಬೊಮ್ಮಾಯಿ ವಿವರಣೆ ನೀಡಿದ್ದಾರೆ.







