ಕ್ರಿಪ್ಟೋ ಅಕ್ರಮ ಹಣ ವರ್ಗಾವಣೆ ಕುರಿತು ಕಳವಳ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕ್ರಿಪ್ಟೋ ಕರೆನ್ಸಿ ಹಾಗೂ ಸಂಬಂಧಿತ ವಿಷಯಗಳ ಕುರಿತು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅನಿಯಂತ್ರಿತ ಕ್ರಿಪ್ಟೋ ಮಾರುಕಟ್ಟೆಗಳು ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಹಣಕಾಸು ಒದಗಿಸುವ ಮಾರ್ಗಗಳಾಗಿ ಬದಲಾಗುತ್ತಿರುವ ಬಗ್ಗೆ ಇಂದಿನ ಪ್ರಮುಖ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
"ಅತಿಯಾದ ಭರವಸೆ ಹಾಗೂ ಪಾರದರ್ಶಕವಲ್ಲದ ಜಾಹೀರಾತು" ಮೂಲಕ ಯುವಕರನ್ನು ದಾರಿ ತಪ್ಪಿಸುವ ಪ್ರಯತ್ನಗಳನ್ನು ತಡೆಯುವ ಅಗತ್ಯವನ್ನು ಸಭೆಯಲ್ಲಿ ತಿಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಅನಿಯಂತ್ರಿತ ಕ್ರಿಪ್ಟೋ ಮಾರುಕಟ್ಟೆಗಳು ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಹಣಕಾಸು ಒದಗಿಸುವ ಮಾರ್ಗಗಳಾಗಲು ಬಿಡಬಾರದು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ. ಇದು ವಿಕಸನಗೊಳ್ಳುತ್ತಿರುವ ತಂತ್ರಜ್ಞಾನವಾಗಿದೆ ಎಂಬ ಅಂಶವನ್ನು ಸರಕಾರವು ಅರಿತುಕೊಂಡಿದೆ. ಆದ್ದರಿಂದ ಸರಕಾರವು ಸೂಕ್ಷ್ಮವಾಗಿ ಗಮನಿಸುತ್ತದೆ ಹಾಗೂ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಬಹುಕೋಟಿ ಮೌಲ್ಯದ ಬಿಟ್ ಕಾಯಿನ್ ಹಗರಣವನ್ನು ಕರ್ನಾಟಕದ ಬಿಜೆಪಿ ಸರಕಾರವು ಮುಚ್ಚಿಹಾಕಿದೆ ಎಂದು ಕಾಂಗ್ರೆಸ್ ದಿಲ್ಲಿಯಲ್ಲಿ ಆರೋಪಿಸಿದ ದಿನವೇ ಈ ಸಭೆ ನಡೆಯುತ್ತಿದೆ. ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.