ಶಿರ್ವಾ: ಬೈಕ್ಗಳ ನಡುವೆ ಢಿಕ್ಕಿ; ಮಹಿಳೆ ಮೃತ್ಯು
ಶಿರ್ವಾ: ಬೈಕ್ಗಳೆರಡು ಪರಸ್ಪರ ಢಿಕ್ಕಿ ಹೊಡೆದು ಒಂದು ಬೈಕ್ನಲ್ಲಿ ಸಹ ಸವಾರಳಾಗಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಕಾಪು ಠಾಣಾ ವ್ಯಾಪ್ತಿಯ ಕುರ್ಕಾಲು ಗ್ರಾಮದ ಕುರ್ಕಾಲು ಜಂಕ್ಷನ್ ಬಳಿ ನಡೆದಿದೆ. ಮೃತಮಹಿಳೆಯನ್ನು 92 ಹೇರೂರು ಗ್ರಾಮದ ಭಜನಾ ಮಂದಿರದ ಬಳಿಯ ನಿವಾಸಿ ಶರ್ಮಿಳಾ (42) ಎಂದು ಗುರುತಿಸಲಾಗಿದೆ.
ಶರ್ಮಿಳಾ ಅವರು ಗಂಡ ಸುರೇಶ್ ಬಿ.ಸೇರಿಗಾರ್ (55) ಅವರೊಂದಿಗೆ ಇಂದು ಬೆಳಗ್ಗೆ ಬೈಕ್ನಲ್ಲಿ ಕೆಲಸದ ನಿಮಿತ್ತ ಉದ್ಯಾವರಕ್ಕೆ ತೆರಳುತ್ತಿದ್ದಾಗ 8:45ರ ಸುಮಾರಿಗೆ ಕುರ್ಕಾಲು ಜಂಕ್ಷನ್ ಬಳಿ ಎದುರಿನಿಂದ ಶಂಕರಪುರ ಕಡೆಯಿಂದ ವೇಗವಾಗಿ ಬರುತಿದ್ದ ಇನ್ನೊಂದು ಬೈಕ್ ಸವಾರ ಯಾವುದೇ ಸೂಚನೆ ನೀಡದೇ ಒಮ್ಮೆಗೆ ತಿರುಗಿಸಿದ್ದರಿಂದ ಇವರ ಬೈಕ್ಗೆ ಢಿಕ್ಕಿ ಹೊಡೆದಿತ್ತು.
ಇದರಿಂದ ಗಂಡ-ಹೆಂಡತಿ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು. ಸುರೇಶ್ರ ಬಲಗಾಲಿನ ಮೂಳೆಮುರಿತವಾದರೆ, ಶರ್ಮಿಳಾ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಕೂಡಲೇ ಅವರನ್ನು ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆದರ್ಶ ಆಸ್ಪತ್ರೆಗೆ ಕರೆದೊಯ್ದಾಗ ಪರೀಕ್ಷಿಸಿದ ವೈದ್ಯರು ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಶಿರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.