ಬಿಟ್ ಕಾಯಿನ್ ಹಗರಣ: ಹೆಸರು ಬಹಿರಂಗಪಡಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

ಬಾಗಲಕೋಟೆ, ನ. 13: `ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ಪಕ್ಷದ ಯಾರಾದರೂ ಇದ್ದರೆ ಕೂಡಲೇ ಅವರ ಹೆಸರನ್ನು ಬಹಿರಂಗಪಡಿಸಲಿ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ.
ಶನಿವಾರ ಜಿಲ್ಲೆಯ ಬಾದಾಮಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರು ಇದ್ದಾರೆಂಬ ಮಾಹಿತಿ ಇದೆ. ಹಗರಣದ ತನಿಖೆ ಪ್ರಗತಿಯಲ್ಲಿದ್ದು, ಯಾವ ಪಕ್ಷದವರು ಇದ್ದಾರೆಂದು ಸಿಎಂ ಬಹಿರಂಗಪಡಿಸಬೇಕು. ಆಗ ಜನತೆ ಇದರ ಹಿಂದೆ ಯಾರೆಲ್ಲ ಇದ್ದಾರೆಂದು ತಿಳಿಯಲಿದೆ' ಎಂದು ಆಗ್ರಹಿಸಿದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ಶ್ರೀಕೃಷ್ಣ ಎಂಬವನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಪೊಲೀಸರು ಬಿಟ್ ಕಾಯಿನ್ ವಶಪಡಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಆ ಕಾಯಿನ್ ಈಗ ಎಲ್ಲಿಗೆ ಹೋಗಿವೆ, ಯಾರ ಬಳಿಯಲ್ಲಿ ಇವೆ ಎಂಬುದನ್ನು ಹೇಳುತ್ತಿಲ್ಲ. ಪೊಲೀಸರು ರಾಜ್ಯ ಸರಕಾರದ ಅಡಿಯಲ್ಲಿ ಬರುವುದರಿಂದ ಈ ವಿಚಾರದಲ್ಲಿ ಸ್ವತಂತ್ರವಾಗಿ ತನಿಖೆ ಮಾಡಲಿದ್ದಾರೆಯೇ ಎಂಬ ಸಂಶಯವಿದೆ ಎಂದು ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದರು.





