ಪುನೀತ್ ರಾಜ್ ಕುಮಾರ್ ನೇತ್ರದಾನ: 10 ಜನರಿಗೆ ದೃಷ್ಟಿ ಭಾಗ್ಯ ಸಾಧ್ಯತೆ

ಬೆಂಗಳೂರು, ನ.13: ಪುನೀತ್ ರಾಜ್ ಕುಮಾರ್ ಅವರ ನಿಧನ ಹಿನ್ನೆಲೆ 10 ಮಂದಿಗೆ ದೃಷ್ಟಿ ಭಾಗ್ಯ ನೀಡುವ ವಿನೂತನ ಪ್ರಯೋಗಕ್ಕೆ ನಾರಾಯಣ ನೇತ್ರಾಲಯ ಕೈಹಾಕಿದ್ದು, ಇದು ದೇಶದಲ್ಲೇ ಮೊಟ್ಟ ಮೊದಲ ಬಾರಿಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಶನಿವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾರಾಯಣ ನೇತ್ರಾಲಯದ ನೇತ್ರ ತಜ್ಞ ಡಾ.ಯತೀಶ್, ಈಗಾಗಲೇ ಪುನೀತ್ ಅವರ ಕಣ್ಣಿನ ಕಪ್ಪುಗುಡ್ಡೆ ಭಾಗವನ್ನು ನಾಲ್ವರಿಗೆ ಜೋಡಿಸಲಾಗಿದೆ. ಆದರೆ, ಕೆಲವರಿಗೆ ಕೆಲವರಿಗೆ ಸ್ಟೆಮ್‍ಸೆಲ್ ಸಮಸ್ಯೆಯಿರುತ್ತದೆ. ಹೀಗಾಗಿ, ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ದೃಷ್ಟಿ ನೀಡಲು ಪ್ರಯೋಗದಲ್ಲಿ ಸ್ಟೆಮ್‍ಸೆಲ್‍ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಈ ಸ್ಟೆಮ್‍ಸೆಲ್‍ನಿಂದ 10 ಜನ ಅಂಧರಿಗೆ ದೃಷ್ಟಿ ಬರಿಸಬಹುದು. ಸ್ಪೆಮ್‍ಸೆಲ್ ಬೆಳವಣಿಗೆಯಾಗಲು ಎರಡು ವಾರ ತಗುಲಿದೆ. ನಂತರ ಸ್ಟೆಮ್‍ಸೆಲ್ ಅಳವಡಿಕೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಪುನೀತ್ ಅವರ ಸ್ಟೆಮ್‍ಸೆಲ್ಸ್ ಈಗಾಗಲೇ ಲ್ಯಾಬ್‍ನಲ್ಲಿಟ್ಟು ವೃದ್ಧಿಪಡಿಸಲಾಗುತ್ತಿದೆ. ಮುಂದಿನ ವಾರದಲ್ಲಿ ಸ್ಟೆಮ್‍ಸೆಲ್ಸ್ ಅಳವಡಿಕೆ ಆಗಲಿದೆ. ಇದಕ್ಕೆ ಬೇಕಾಗಿರುವ ಜನರನ್ನೂ ಡಾ. ರಾಜ್‍ಕುಮಾರ್ ಐ ಬ್ಯಾಂಕ್ ಮೂಲಕ ಪತ್ತೆ ಹಚ್ಚಲಾಗಿದೆ. ಈ ಪ್ರಯತ್ನ ಇಡೀ ದೇಶದಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಅಲ್ಲದೆ, ಬಿಳಿ ಗುಡ್ಡೆ ಮಧ್ಯೆ ಸ್ಟೆಮ್‍ಸೆಲ್ಸ್ ಇರುತ್ತದೆ. ಇದು ಕಣ್ಣನ್ನು ಸ್ವಚ್ಛವಾಗಿಡಲು ಕೆಲಸ ಮಾಡುತ್ತದೆ. ಸ್ಟೆಮ್‍ಸೆಲ್ಸ್ ಗಾಯಗೊಂಡರೆ ಕಪ್ಪು ಗುಡ್ಡೆಗೆ ಸಮಸ್ಯೆ ಆಗುತ್ತದೆ. ಇದರಿಂದ ದೃಷ್ಟಿಯಲ್ಲಿ ಏರುಪೇರಾಗುತ್ತದೆ. ಹೀಗೆ ಸ್ಟೆಮ್‍ಸೆಲ್ಸ್ ಗಾಯ ಆಗಿರುವ ಜನರಿಗೆ ಈಗ ನಾವು ಇದನ್ನು ಅಳವಡಿಕೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ ಮಾತನಾಡಿ, ಪುನೀತ್ ಕಣ್ಣುಗಳ ಕಾರ್ನಿಯಾದಿಂದ ಈಗಾಗಲೇ ನಾಲ್ಕು ಜನರಿಗೆ ದೃಷ್ಟಿ ನೀಡಲಾಗಿದೆ. ಈಗ ಅವರ ಸ್ಟೆಮ್‍ಸೆಲ್‍ಗಳಿಂದ 5 ರಿಂದ 10 ಜನರಿಗೆ ದೃಷ್ಟಿ ನೀಡಬಹುದು ಎಂದರು.







