ಬಿಹಾರದ ಪತ್ರಕರ್ತ,ಆರ್‌ಟಿಐ ಕಾರ್ಯಕರ್ತನ ಶವ ಸುಟ್ಟ ಸ್ಥಿತಿಯಲ್ಲಿ ರಸ್ತೆ ಬದಿ ಪತ್ತೆ

ಪಾಟ್ನಾ: ನಾಲ್ಕು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 22ರ ಹರೆಯದ ಪತ್ರಕರ್ತ ಹಾಗೂ ಆರ್‌ಟಿಐ ಕಾರ್ಯಕರ್ತನ ಶವ ಶುಕ್ರವಾರ ಸಂಜೆ ಬಿಹಾರದ ಮಧುಬನಿ ಜಿಲ್ಲೆಯ ಹಳ್ಳಿಯೊಂದರ ಬಳಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ರಸ್ತೆಬದಿಯಲ್ಲಿ ಪತ್ತೆಯಾಗಿದೆ ಎಂದು NDTV ವರದಿ ಮಾಡಿದೆ.
ಪತ್ರಕರ್ತ ಬುದ್ದಿನಾಥ್ ಝಾ ಅಲಿಯಾಸ್ ಅವಿನಾಶ್ ಝಾ ಸ್ಥಳೀಯ ಸುದ್ದಿ ಪೋರ್ಟಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು 'ನಕಲಿ' ಎಂದು ಆರೋಪಿಸಿರುವ ವೈದ್ಯಕೀಯ ಚಿಕಿತ್ಸಾಲಯಗಳನ್ನು ಹೆಸರಿಸುವ ಫೇಸ್‌ಬುಕ್ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ ಎರಡು ದಿನಗಳ ನಂತರ ಅವರು ಕಣ್ಮರೆಯಾಗಿದ್ದರು. ಅವಿನಾಶ್ ಫೇಸ್ ಬುಕ್ ಪೋಸ್ಟ್ ನಿಂದಾಗಿ ಅಂತಹ ಕೆಲವು ನಕಲಿ ಕ್ಲಿನಿಕ್‌ಗಳನ್ನು ಮುಚ್ಚಲು ಮತ್ತು ಇತರರಿಗೆ ಭಾರಿ ದಂಡವನ್ನು ವಿಧಿಸಲು ಕಾರಣವಾಯಿತು.
ವರದಿಯ ಸಮಯದಲ್ಲಿ ಬುದ್ಧಿನಾಥ್ ಅವರು ಹಲವಾರು ಬೆದರಿಕೆಗಳು ಹಾಗೂ ಲಕ್ಷಾಂತರ ಲಂಚದ ಕೊಡುಗೆಗಳನ್ನು ಸ್ವೀಕರಿಸಿದ್ದರು. ಇವೆರಡಕ್ಕೂ ಜಗ್ಗದ ಅವರು ತಮ್ಮ ಕೆಲಸವನ್ನು ಮುಂದುವರಿಸಿದ್ದರು.
ಬೆನಿಪತಿಯ ಲೋಹಿಯಾ ಚೌಕ್ ಬಳಿಯ ಅವರ ಮನೆಯ ಬಳಿ ಅಳವಡಿಸಲಾದ ಸಿಸಿಟಿವಿ ಫೀಡ್‌ನಲ್ಲಿ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ.
ನವೆಂಬರ್ 12, ಶುಕ್ರವಾರ ಬುದ್ದಿನಾಥ್ ಅವರ ಸೋದರಸಂಬಂಧಿ ಬಿಜೆ ವಿಕಾಸ್ ಅವರು ಬೆಟೌನ್ ಗ್ರಾಮದ ಮೂಲಕ ಹಾದುಹೋಗುವ ಹೆದ್ದಾರಿಯಲ್ಲಿ ಶವ ಪತ್ತೆಯಾಗಿದೆ ಎಂದು ಮಾಹಿತಿ ಪಡೆದರು. ಕೆಲ ಸಂಬಂಧಿಕರು ಹಾಗೂ ಅಧಿಕಾರಿಗಳು ಅಲ್ಲಿಗೆ ಧಾವಿಸಿದ್ದು, ಬೆರಳಿನಲ್ಲಿದ್ದ ಉಂಗುರ, ಕಾಲಿನ ಗುರುತು ಹಾಗೂ ಕುತ್ತಿಗೆಯಲ್ಲಿದ್ದ ಚೈನ್ ನಿಂದ ಬುದ್ಧಿನಾಥನ ಶವ ಗುರುತಿಸಲಾಗಿದೆ.







