ಕೊರೋನ ಸೋಂಕಿನಿಂದ ಮೃತರಾದವರ ಆಡಿಟ್ ವರದಿ ಬಿಡುಗಡೆಗೆ ಬಿಬಿಎಂಪಿ ಸಿದ್ಧತೆ

ಬೆಂಗಳೂರು, ನ.13: ಕೊರೋನ ಮೊದಲ ಅಲೆ ಮತ್ತು ಎರಡನೇ ಅಲೆ ಸಾವಿನ ಪರಿಶೋಧನಾ ವರದಿ ಬಿಡುಗಡೆಗೆ ಪಾಲಿಕೆ ಸಿದ್ಧತೆ ನಡೆಸುತ್ತಿದೆ. ಮುಂದಿನ ವಾರ ಆರೋಗ್ಯ ಸಚಿವರ ಸಮ್ಮುಖದಲ್ಲಿ ಕೊರೋನ ಸೋಂಕಿನಿಂದ ಮೃತರಾದವರ ಆಡಿಟ್ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಕೋವಿಡ್‍ಗೆ ಬಲಿಯಾದವರ ಸಂಖ್ಯೆಯ ಕುರಿತು ವರದಿಯಲ್ಲಿ ಮಾಹಿತಿ ನೀಡಲಾಗುತ್ತದೆ ಎಮದು ಬಿಬಿಎಂಪಿ ತಿಳಿಸಿದೆ.
ಮೊದಲ ಮತ್ತು ಎರಡನೇ ಅಲೆಯಲ್ಲಿ ಬೆಂಗಳೂರಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಒಟ್ಟು 16,307 ಆಗಿದ್ದು, ಈ ಪೈಕಿ 4,480 ಮೊದಲ ಅಲೆಯಲ್ಲಿ ಮತ್ತು 11,827 ಮಂದಿ ಎರಡನೇ ಅಲೆಯಿಂದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೊರೋನ ಡೆತ್ ಆಡಿಟ್ ವರದಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ನಗರದಲ್ಲಿ ಮೊದಲ ಅಲೆಯಲ್ಲಿ ಸಾವನ್ನಪ್ಪಿದ 4,480 ಒಟ್ಟು ಜನಸಂಖ್ಯೆಯಲ್ಲಿ ಪುರುಷರ ಸಂಖ್ಯೆ 3,048 ಆಗಿದ್ದು, ಮಹಿಳೆಯರು 1,431 ಮತ್ತು ಒಬ್ಬರು ತೃತೀಯ ಲಿಂಗಿಗಳಿದ್ದಾರೆ. ಮೊದಲ ಅಲೆಯಲ್ಲಿ 70 ವರ್ಷ ಮೇಲ್ಪಟ್ಟವರು 1,459 ಮಂದಿ ಬಲಿಯಾಗಿದ್ದು, ಅದರಲ್ಲಿ 439 ಮಹಿಳೆಯರು ಮತ್ತು 1,020 ಮಂದಿ ಪರುಷರು ಸೇರಿದ್ದಾರೆ.
ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರ ಒಟ್ಟು 11,827 ಬಲಿಯಾಗಿದ್ದು, ಅದರಲ್ಲಿ 7,271 ಪುರುಷರು, 4,553 ಮಹಿಳೆಯರು ಮತ್ತು 03 ತೃತೀಯ ಲಿಂಗಿಗಳು ಸೋಂಕಿಗೆ ಬಲಿಯಾಗಿದ್ದಾರೆ. ಎರಡನೇ ಅಲೆಯಲ್ಲೂ ಕೂಡ 70 ವರ್ಷ ಮೇಲ್ಪಟ್ಟವರೇ ಹೆಚ್ಚು ಕೊರೋನಗೆ ಬಲಿಯಾಗಿದ್ದಾರೆ. 70 ವರ್ಷಕ್ಕಿಂತ ಮೇಲ್ಪಟ್ಟ 3,994 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 1,458 ಮಹಿಳೆಯರು ಮತ್ತು 2,536 ಮಂದಿ ಪುರುಷರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.







