ಲಸಿಕೆ ಬೂಸ್ಟರ್ ಎಂಬುದು ಒಂದು ‘ಹಗರಣ’ : ವಿಶ್ವ ಆರೋಗ್ಯ ಸಂಸ್ಥೆ

ನ್ಯೂಯಾರ್ಕ್, ನ.13: ಕಡಿಮೆ ಆದಾಯದ ದೇಶಗಳಲ್ಲಿ ಕೊರೋನ ವಿರುದ್ಧದ ಮೊದಲನೇ ಡೋಸ್ ಲಸಿಕೆ ನೀಡಲೂ ತಾಪತ್ರಯ ಪಡಬೇಕಾದ ಸಂದರ್ಭದಲ್ಲಿ ವಿಶ್ವದ ಕೆಲವು ದೇಶಗಳಲ್ಲಿ ಬೂಸ್ಟರ್ ಡೋಸ್ ಲಸಿಕೆ ಡೋಸ್ ಹೆಸರಿನಲ್ಲಿ ನಡೆಯುತ್ತಿರುವ ಅಸಮಾನತೆಯು ಒಂದು ಹಗರಣವಾಗಿದ್ದು ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಶ್ರೀಮಂತ ದೇಶಗಳು ಕೊರೋನ ವಿರುದ್ಧದ ಲಸಿಕೆಯನ್ನು ಭಾರೀ ಪ್ರಮಾಣದಲ್ಲಿ ದಾಸ್ತಾನಿರಿಸಿಕೊಳ್ಳುತ್ತಿದ್ದರೆ ಕಡಿಮೆ ಆದಾಯದ ದೇಶಗಳಲ್ಲಿ ಹಿರಿಯ ನಾಗರಿಕರಿಗೆ, ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಪ್ರಥಮ ಡೋಸ್ ಲಸಿಕೆ ನೀಡಲೂ ಲಸಿಕೆಯ ಕೊರತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಹಾಗೂ ಇತರ ಪ್ರಮುಖರು ಟೀಕಿಸಿದ್ದಾರೆ. ಕೊರೋನ ವಿರುದ್ಧಧ ಬೂಸ್ಟರ್ ಲಸಿಕೆ ನೀಡುವ ಪ್ರಕ್ರಿಯೆಯನ್ನು ಜಾಗತಿಕ ಮಟ್ಟದಲ್ಲಿ ಸ್ಥಗಿತಗೊಳಿಸುವಂತೆ ಆಗಸ್ಟ್‌ನಲ್ಲಿ ಅವರು ಆಗ್ರಹಿಸಿದ್ದರು.
ಆದರೆ, ಅಮೆರಿಕ, ಕೆನಡಾ, ಇಸ್ರೇಲ್, ಜರ್ಮನಿ ಸೇರಿದಂತೆ ಹಲವು ದೇಶಗಳು ಬೂಸ್ಟರ್ ಲಸಿಕೆ ನೀಡುವುದನ್ನು ಮುಂದುವರಿಸಿದ್ದವು. ಬೂಸ್ಟರ್ ಲಸಿಕೆ ಡೋಸ್ ನೀಡುವುದನ್ನು 92 ದೇಶಗಳು ದೃಢಪಡಿಸಿದ್ದು ಇದರಲ್ಲಿ ಯಾವುದೂ ಕಡಿಮೆ ಆದಾಯದ ದೇಶಗಳಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವದೆಲ್ಲೆಡೆ ಪ್ರತೀ ದಿನ ಸುಮಾರು 28.5 ಮಿಲಿಯನ್ ಕೊರೋನ ಲಸಿಕೆ ಡೋಸ್ ನೀಡಲಾಗುತ್ತಿದ್ದು ಇದರಲ್ಲಿ ಸುಮಾರು 25%ದಷ್ಟು ಬೂಸ್ಟರ್ ಅಥವಾ ಹೆಚ್ಚುವರಿ ಲಸಿಕೆಗಳಾಗಿವೆ ( ಕೊರೋನ ವಿರುದ್ಧಧ ಸಂಪೂರ್ಣ ಲಸಿಕೆ ಪಡೆದವರಿಗೆ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಲು ನೀಡುವ ಲಸಿಕೆ ಬೂಸ್ಟರ್ ಲಸಿಕೆ. ಈ ಹಿಂದೆ ಕೊರೋನ ಲಸಿಕೆಯ ಪೂರ್ಣ ಡೋಸ್ ಪಡೆದಿದ್ದರೂ ಸೋಂಕಿನ ವಿರುದ್ಧ ರಕ್ಷಣೆ ದೊರಕದ ವ್ಯಕ್ತಿಗಳಿಗೆ ನೀಡುವ ಲಸಿಕೆ ಹೆಚ್ಚುವರಿ ಲಸಿಕೆಯಾಗಿದೆ). 28.5 ಮಿಲಿಯನ್ ದೈನಂದಿನ ಲಸಿಕೆಯಲ್ಲಿ ಸುಮಾರು 1.1 ಮಿಲಿಯನ್ ಮಾತ್ರ ಕಡಿಮೆ ಆದಾಯದ ದೇಶಗಳಲ್ಲಿ ನೀಡುವ ಪ್ರಾಥಮಿಕ ಡೋಸ್ ಲಸಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.







