ಪಶ್ಚಿಮ ದೇಶಗಳು - ರಶ್ಯಾ ಮಧ್ಯೆ ಆಕಸ್ಮಿಕ ಯುದ್ಧದ ಅಪಾಯ: ಬ್ರಿಟನ್ ಸೇನಾ ಮುಖ್ಯಸ್ಥರ ಎಚ್ಚರಿಕೆ
ಲಂಡನ್, ನ.13: ಹಲವಾರು ಸಾಂಪ್ರದಾಯಿಕ ರಾಜತಾಂತ್ರಿಕ ಸಾಧನಗಳು ಇನ್ನು ಮುಂದೆ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಪಶ್ಚಿಮ ದೇಶಗಳು ಹಾಗೂ ರಶ್ಯಾದ ಮಧ್ಯೆ ಅಚಾನಕ್ (ಆಕಸ್ಮಿಕ) ಯುದ್ಧ ಭುಗಿಲೇಳುವ ಅಪಾಯದ ಸಾಧ್ಯತೆ ಶೀತಲಯುದ್ಧದ ಸಂದರ್ಭಕ್ಕಿಂತಲೂ ಈಗ ಹೆಚ್ಚಿದೆ ಎಂದು ಬ್ರಿಟನ್‌ನ ಹಿರಿಯ ಸೇನಾಧಿಕಾರಿ ಹೇಳಿದ್ದಾರೆ. ಸರಕಾರಗಳ (ರಾಷ್ಟ್ರಗಳ) ಮಧ್ಯೆ ವಿಭಿನ್ನ ಉದ್ದೇಶ ಮತ್ತು ವಿಭಿನ್ನ ಅಜೆಂಡಾಗಳಿಗೆ ಸಂಬಂಧಿಸಿದ ಪೈಪೋಟಿ ಹೆಚ್ಚಿರುವ ನೂತನ ಬಹುಧ್ರುವೀಯ ಪ್ರಪಂಚದಲ್ಲಿ ಉದ್ವಿಗ್ನತೆ ಹೆಚ್ಚುವ ಅಪಾಯ ಮತ್ತು ಸಾಧ್ಯತೆಯಿದೆ. ನಮ್ಮ ಕೆಲವೊಂದು ರಾಜಕೀಯ ಪ್ರಕ್ರಿಯೆಯ ಕಲಹಪ್ರಿಯ ಸ್ವರೂಪದಿಂದ ಉಲ್ಬಣವು ತಪ್ಪುಲೆಕ್ಕಾಚಾರಕ್ಕೆ ಕಾರಣವಾಗದಂತೆ ನಾವು ಜಾಗರೂಕರಾಗಿರಬೇಕು ಎಂದು ರಕ್ಷಣಾ ಸಿಬಂದಿ ಮುಖ್ಯಸ್ಥ ಜನರಲ್ ನಿಕ್ ಕಾರ್ಟರ್ ಹೇಳಿದ್ದಾರೆ. ಸರ್ವಾಧಿಕಾರಿ ಪ್ರತಿಸ್ಪರ್ಧಿಗಳು ವಲಸಿಗರು, ಅನಿಲದ ದರ ಹೆಚ್ಚಳ, ಸೈಬರ್ ದಾಳಿಯಂತಹ ಛಾಯಾ ಶಕ್ತಿಗಳ ಬಳಕೆ ಮುಂತಾದ ಯಾವುದೇ ಸಾಧನಗಳನ್ನು ಬಳಸಬಹುದು. ಯುದ್ಧದ ಗುಣಲಕ್ಷಣ ಬದಲಾಗಿದೆ. ಶೀತಲ ಯುದ್ಧದ ದ್ವಿ- ಧ್ರುವೀಯ ಪ್ರಪಂಚದಿಂದ ಹಿಡಿದು, ಅಮೆರಿಕ ಪ್ರಭುತ್ವದ ಏಕಧ್ರುವ ಪ್ರಪಂಚದ ಬಳಿಕ ಈಗ ರಾಜತಂತ್ರಜ್ಞರು ಅತ್ಯಂತ ಸಂಕೀರ್ಣವಾದ ಬಹುಧ್ರುವೀಯ ಪ್ರಪಂಚದ ಸವಾಲನ್ನು ಎದುರಿಸಬೇಕಾಗಿದೆ. ಸಾಂಪ್ರದಾಯಿಕ ಶೀತಲಯುದ್ಧದ ರಾಜತಾಂತ್ರಿಕ ಸಾಧನ ಹಾಗೂ ವ್ಯವಸ್ಥೆಗಳು ಇನ್ನು ಮುಂದೆ ಲಭ್ಯವಾಗದು. ಇವುಗಳ ಅಲಭ್ಯತೆಯಿಂದ ಉಲ್ಬಣವು ತಪ್ಪುಲೆಕ್ಕಾಚಾರಕ್ಕೆ ಎಡೆಮಾಡಿಕೊಡುವ ಅಪಾಯವಿದೆ ಎಂದವರು ಎಚ್ಚರಿಸಿದ್ದಾರೆ. ಬೆಲಾರೂಸ್ ದೇಶ ಸಾವಿರಾರು ವಲಸಿಗರನ್ನು ಯುರೋಪಿಯನ್ ಯೂನಿಯನ್‌ನ ಸದಸ್ಯ ದೇಶ ಪೋಲಂಡ್‌ನ ಗಡಿಭಾಗದಲ್ಲಿ ಜಮಾವಣೆಗೊಳಿಸಿರುವುದರಿಂದ ಆ ಪ್ರದೇಶದಲ್ಲಿ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ನೆಲೆಸಿದೆ ಎಂಬ ಅಸಮಾಧಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರ್ವ ಯುರೋಪ್‌ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಈ ಮಧ್ಯೆ, ಈ ವಿವಾದದಲ್ಲಿ ರಶ್ಯಾ ಮತ್ತು ನೇಟೋ ಕೂಡಾ ಸೇರಿಕೊಳ್ಳುವ ಸೂಚನೆ ಲಭಿಸಿರುವುದರಿಂದ ಸಮಸ್ಯೆ ಬಿಗಡಾಯಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಬೆಲಾರೂಸ್ ಗಡಿಭಾಗದಲ್ಲಿ ಪೋಲಂಡ್‌ಗೆ ತಾಂತ್ರಿಕ ನೆರವು ಒದಗಿಸಲು ಬ್ರಿಟನ್‌ನ ಮಿಲಿಟರಿ ಸಿಬಂದಿಯ ಸಣ್ಣ ತುಕಡಿಯೊಂದನ್ನು ನಿಯೋಜಿಸಲಾಗಿದೆ ಎಂದು ಬ್ರಿಟನ್ ಶುಕ್ರವಾರ ಹೇಳಿದೆ. ಅಲ್ಲದೆ ಶುಕ್ರವಾರ ರಶ್ಯಾದ ವಾಯುಕ್ಷೇತ್ರದಿಂದ ಹೊರಬಂದು ಹಾರಾಟ ನಡೆಸಿದ 2 ರಶ್ಯನ್ ಯುದ್ಧವಿಮಾನಗಳನ್ನು ಬ್ರಿಟನ್ ಟೈಫೂನ್ ಯುದ್ಧವಿಮಾನ ತಡೆಹಿಡಿದು ವಾಪಾಸು ಕಳಿಸಿದೆ ಎಂದೂ ವರದಿಯಾಗಿದೆ. ಕಪ್ಪು ಸಮುದ್ರದಲ್ಲಿ ನ್ಯಾಟೊ ಪಡೆಗಳ ಅನಿಯತ(ನಿಗದಿಯಾಗದ) ಮಿಲಿಟರಿ ಕವಾಯತು ರಶ್ಯಾಕ್ಕೆ ಗಂಭೀರ ಸವಾಲನ್ನು ಎಸೆದಿದೆ. ಬೆಲಾರೂಸ್-ಪೋಲಂಡ್ ಗಡಿಭಾಗದಲ್ಲಿ ಉದ್ಬವಿಸಿರುವ ಸಮಸ್ಯೆಗೂ ರಶ್ಯಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಪ್ರತಿಕ್ರಿಯಿಸಿದ್ದಾರೆ.





