7 ಹೆಚ್ಚುವರಿ ದಿನಕ್ಕೆ ಮುಂದುವರಿದ ಸಿಒಪಿ26 ಸಮಾವೇಶ
ಗ್ಲಾಸ್ಗೋ, ನ.13: ಹವಾಮಾನ ಬದಲಾವಣೆ ಸಮಸ್ಯೆಗೆ ಶೀಘ್ರ ಪರಿಹಾರ ರೂಪಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಬ್ರಿಟನ್‌ನ ಗ್ಲಾಸ್ಗೋದಲ್ಲಿ ಹಮ್ಮಿಕೊಳ್ಳಲಾದ ಹವಾಮಾನ ಬದಲಾವಣೆ ಸಮಾವೇಶದ ಅಂತಿಮ ದಿನವಾದ ಶುಕ್ರವಾರವೂ ಕೆಲವು ವಿಷಯಗಳಲ್ಲಿ ಸಹಮತ ಮೂಡದ ಹಿನ್ನೆಲೆಯಲ್ಲಿ ನವೆಂಬರ್ 13 ಶನಿವಾರಕ್ಕೂ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ. ಭೂಮಿಗೆ ಬೆದರಿಕೆ ಒಡ್ಡಿರುವ ತಾಪಮಾನ ಏರಿಕೆ ಸಮಸ್ಯೆಯ ಬಗ್ಗೆ ಇನ್ನಷ್ಟು ಚರ್ಚೆ ನಡೆದು, ತಾಪಮಾನ ಮಿತಿಯನ್ನು 1.5 ಸೆಲ್ಶಿಯಸ್‌ಗೆ ಸೀಮಿತಗೊಳಿಸುವ ಪ್ಯಾರಿಸ್ ಒಪ್ಪಂದದ ಗುರಿ ತಲುಪುವ ನಿಟ್ಟಿನಲ್ಲಿ ಸದಸ್ಯ ರಾಷ್ಟ್ರಗಳು ಗಂಭೀರ ಹಾಗೂ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಒಪಿ26 ಸಮಾವೇಶದ ಅಧ್ಯಕ್ಷತೆ ವಹಿಸಿರುವ ಬ್ರಿಟನ್ ಸಚಿವ ಅಲೋಕ್ ಶರ್ಮ ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಶನಿವಾರ ಸಹಮತದ ಅಂತಿಮ ನಿರ್ಧಾರ ರೂಪುಗೊಳ್ಳುವ ನಿರೀಕ್ಷೆಯಿದೆ. ಕಳೆದ 2 ವಾರಗಳಲ್ಲಿ ನಾವು ಸುದೀರ್ಘ ಹಾದಿ ಕ್ರಮಿಸಿದ್ದೇವೆ. ಇದೀಗ ‘ಕಾರ್ಯರೂಪದಲ್ಲಿ ಮಾಡಿ ತೋರಿಸುವ’ ಅಂತಿಮ ಚೈತನ್ಯದ ಇಂಜೆಕ್ಷನ್‌ನ ಅಗತ್ಯವಿದೆ ಎಂದವರು ಹೇಳಿದ್ದಾರೆ. ತಾಪಮಾನ ಬದಲಾವಣೆ ಬಿಕ್ಕಟ್ಟು ದುರಂತವಾಗಿ ಪರಿಣಮಿಸುವ ಮುನ್ನ ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸಲು ಸರಕಾರಗಳು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಂಡು ಉದ್ದೇಶಿತ ಗುರಿ ಸಾಧನೆಗೆ ಪ್ರಯತ್ನಿಸಬೇಕು ಎಂದು ಶುಕ್ರವಾರ ಬಿಡುಗಡೆಗೊಂಡಿರುವ ಅಂತಿಮ ನಿರ್ಧಾರದ ಕುರಿತ ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಶಿಯಸ್‌ಗೆ ಮಿತಿಗೊಳಿಸುವ 2015ರ ಪ್ಯಾರಿಸ್ ಒಪ್ಪಂದದ ಗುರಿಯನ್ನು ತಲುಪುವ, ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು ನಿವಾರಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸುವ ಮುಖ್ಯ ಉದ್ದೇಶವನ್ನು ಸಿಒಪಿ26 ಸಮಾವೇಶ ಹೊಂದಿತ್ತು. ಆದರೆ, ಇಂಗಾಲ ಹೊರಸೂಸುವಿಕೆ ಪ್ರಮಾಣ ಕಡಿತದ ನಿಟ್ಟಿನಲ್ಲಿ ಹಲವು ರಾಷ್ಟ್ರಗಳು ಸೂಚಿಸಿರುವ ಕ್ರಮಗಳು ಸಾಕಾಗದು ಮತ್ತು ಇದರಿಂದ ತಾಪಮಾನ ಬದಲಾವಣೆ ಮಿತಿಮೀರಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಇದೀಗ ಹೊಸದಾಗಿ ರಚಿಸಿರುವ ಕರಡು ನಿರ್ಣಯವು ಸಮತೋಲನದ ಉದ್ದೇಶದ್ದಾಗಿದ್ದು ಖನಿಜ ತೈಲದ ರಫ್ತನ್ನೇ ಪ್ರಮುಖ ಆದಾಯ ಮೂಲವನ್ನಾಗಿ ಹೊಂದಿರುವ ದೇಶಗಳು, ವಿಶ್ವದಲ್ಲಿ ಅತ್ಯಧಿಕ ವಾಯುಮಾಲಿನ್ಯ ಸಮಸ್ಯೆಯುಳ್ಳ ದೇಶಗಳು ಹಾಗೂ ಹವಾಮಾನ ಸಂಬಂಧಿ ದುರಂತದ ಅಪಾಯ ಹೆಚ್ಚಿರುವ ದೇಶಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಈ ಕರಡು ನಿರ್ಣಯ ರೂಪಿಸಲಾಗಿದೆ. ತಾಪಮಾನ ನಿಯಂತ್ರಣದ ಕುರಿತು ಮುಂದಿನ ವರ್ಷ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹವನ್ನು ನೂತನ ಕರಡು ನಿರ್ಣಯದಲ್ಲೂ ಉಳಿಸಿಕೊಳ್ಳಲಾಗಿದ್ದರೂ ಈ ಆಗ್ರಹವನ್ನು ಮೃದು ಸ್ವರೂಪದಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಅಭಿವೃದ್ಧಿಶೀಲ ದೇಶಗಳ ಬೇಡಿಕೆಯಾದ, ತಾಪಮಾನ ನಿಯಂತ್ರಣ ಕ್ರಮದ ವಾರ್ಷಿಕ ಪರಿಶೀಲನೆ ಪ್ರಕ್ರಿಯೆಯ ಕುರಿತು ಇಲ್ಲಿ ಯಾವುದೇ ಉಲ್ಲೇಖವಿಲ್ಲ. ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಹಂತಹಂತವಾಗಿ ಕಡಿಮೆಗೊಳಿಸುವ ನಿರ್ಧಾರವನ್ನು ಹಲವು ರಾಷ್ಟ್ರಗಳು ಪ್ರಕಟಿಸಿದ್ದರಿಂದ , ಸಮುದ್ರದ ಮಟ್ಟ ಏರಿಕೆ, ಪ್ರವಾಹ, ಬರಗಾಲ ಮುಂತಾದ ಜಾಗತಿಕ ತಾಪಮಾನಕ್ಕೆ ಸಂಬಂಧಿಸಿದ ಸಮಸ್ಯೆ ಬಿಗಡಾಯಿಸುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.







