ಕ್ಯಾಪಿಟಲ್ ಹಿಲ್ಸ್ ದಂಗೆ ಪ್ರಕರಣ: ಟ್ರಂಪ್ ಸಲಹೆಗಾರ ಬ್ಯಾನನ್ ವಿರುದ್ಧ ದೋಷಾರೋಪ
ವಾಷಿಂಗ್ಟನ್, ನ.13: ಜನವರಿ 6ರಂದು ನಡೆದ ಕ್ಯಾಪಿಟಲ್ ಹಿಲ್ಸ್ ದಂಗೆ ಪ್ರಕರಣಕ್ಕೆ ಸಂಬಂಧಿಸಿ, ಅಮೆರಿಕ ಸಂಸತ್ತಿನ ಎದುರು ವಿಚಾರಣೆಗೆ ಹಾಜರಾಗಬೇಕೆಂಬ ನ್ಯಾಯಾಲಯ ಹಾಜರಾತಿ ಆಜ್ಞೆಯನ್ನು ತಿರಸ್ಕರಿಸಿದ ಕಾರಣಕ್ಕೆ , ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರ ಸ್ಟೀವ್ ಬ್ಯಾನನ್ ವಿರುದ್ಧ ಸಂಸತ್‌ಗೆ ನಿಂದನೆ ಎಸಗಿದ 2 ಕೌಂಟ್‌ಗಳ ದೋಷಾರೋಪ ಹೊರಿಸಲಾಗಿದೆ. ಹೇಳಿಕೆ ನೀಡಲು ಸಂಸತ್ ಸಮಿತಿಯ ಎದುರು ಹಾಜರಾಗಲು ನಿರಾಕರಿಸಿದ್ದಕ್ಕೆ 1 ಕೌಂಟ್ ಆರೋಪ, ದಾಖಲೆ ಪತ್ರ ಒದಗಿಸಲು ನಿರಾಕರಿಸಿದ್ದಕ್ಕೆ ಮತ್ತೊಂದು ಕೌಂಟ್ ದೋಷಾರೋಪವನ್ನು ಬ್ಯಾನನ್ ವಿರುದ್ಧ ಹೊರಿಸಲಾಗಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ. ಈ ಪ್ರಕರಣದಲ್ಲಿ ಒಂದು ಕೌಂಟ್ ಅಪರಾಧಕ್ಕೆ ಕನಿಷ್ಟ 30 ದಿನ ಜೈಲುಶಿಕ್ಷೆ ಮತ್ತು 1 ವರ್ಷದವರೆಗೆ ಬಂಧನ ಶಿಕ್ಷೆ ವಿಧಿಸಬಹುದಾಗಿದೆ. ತಾನು ನಡೆಸಿರುವ ಪತ್ರವ್ಯವಹಾರ, ಫೋನ್ ಕರೆಗಳನ್ನು ಸರಕಾರಿ ರಹಸ್ಯ ಕಾಪಾಡಿಕೊಳ್ಳುವ ಕಾಯ್ದೆಯಡಿ ಪರಿಗಣಿಸಬೇಕೆಂದು ಮಾಜಿ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ ಎಂದು ಬ್ಯಾನನ್ ಹೇಳಿದ್ದರು. ಆದರೆ ಈ ದಾಖಲೆಗಳನ್ನು ಸರಕಾರಿ ರಹಸ್ಯ ಕಾಯ್ದಯಡಿ ಪರಿಗಣಿಸಲಾಗದು ಎಂದು ಅಮೆರಿಕ ಅಧ್ಯಕ್ಷ ಬೈಡನ್ ಸ್ಪಷ್ಟಪಡಿಸಿದ್ದರು. ವಸ್ತುಸ್ಥಿತಿ, ವಾಸ್ತವಾಂಶ ಮತ್ತು ಕಾನೂನಿನ ಅಂಶಗಳನ್ನು ಪರಿಗಣಿಸಿ ನ್ಯಾಯಾಂಗ ಇಲಾಖೆ ಕಾನೂನಿನಡಿ ಎಲ್ಲರೂ ಒಂದೇ ಎಂಬ ತನ್ನ ನಿಲುವನ್ನು ಮತ್ತೊಮ್ಮೆ ಜಾಹೀರುಗೊಳಿಸಿದೆ ಎಂದು ಅಮೆರಿಕದ ಅಟಾರ್ನಿ ಜನರಲ್ ಮೆರಿಕ್ ಗಾರ್ಲಾಂಡ್ ಹೇಳಿದ್ದಾರೆ.





