ಡೆಂಗಿಗೆ ಸಂಬಂಧಿಸಿದ ಬ್ಲ್ಯಾಕ್ ಫಂಗಸ್ ಪತ್ತೆ

ಸಾಂದರ್ಭಿಕ ಚಿತ್ರ (source: PTI)
ಹೊಸದಿಲ್ಲಿ, ನ.14 ಡೆಂಗಿ ಜ್ವರದಿಂದ ಚೇತರಿಸಿಕೊಂಡ ಹದಿನೈದು ದಿನಗಳ ಒಳಗಾಗಿ 49 ವರ್ಷದ ರೋಗಿಯೊಬ್ಬರನ್ನು ಮ್ಯೂಕೊರ್ಮೈಕೊಸಿಸ್ ಸಮಸ್ಯೆ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡೆಂಗಿ ಜ್ವರದಿಂದ ಚೇರಿಸಿಕೊಂಡ ವ್ಯಕ್ತಿಯೊಬ್ಬರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿರುವ ಅಪರೂಪದ ಪ್ರಕರಣ ಇದಾಗಿದೆ. ಬ್ಲ್ಯಾಕ್ ಫಂಗಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡೆದ ತಾಲಿಬ್ ಮುಹಮ್ಮದ್ ಅವರನ್ನು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲಿಬ್ ಡೆಂಗಿಯಿಂದ ಚೇತರಿಸಿಕೊಂಡ ಬಳಿಕ ಒಂದು ಕಣ್ಣಿನ ದೃಷ್ಟಿಯನ್ನು ದಿಢೀರನೇ ಕಳೆದುಕೊಂಡು ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಬ್ಲ್ಯಾಕ್ ಫಂಗಸ್ ನ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ಡೆಂಗಿ ರೋಗಿಗಳು ಚೇತರಿಸಿಕೊಂಡ ಬಳಿಕ ಈ ಸಮಸ್ಯೆ ಕಾಣಿಸಿಕೊಂಡ ಅಪರೂಪದ ಪ್ರಕರಣ ಇದಾಗಿದೆ. ಸಾಮಾನ್ಯವಾಗಿ ಮಧುಮೇಹ, ಪ್ರತಿರೋಧ ಶಕ್ತಿ ಕೊರತೆ ಮತ್ತು ಇತರ ಸೋಂಕಿನ ಇತಿಹಾಸವಿರುವ ರೋಗಿಗಳಲ್ಲಿ ಮಾತ್ರ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಮ್ಯೂಕೋರ್ ಎಂಬ ಫಂಗಸ್ ಸಮೂಹದಿಂದ ಉಂಟಾಗುವ ಮಾರಕ ಸೋಂಕು ಆಗಿದೆ. ಈ ಫಂಗಸ್ ಆರೋಗ್ಯವಂತ ವ್ಯಕ್ತಿಯ ಮೂಗು, ಸೈನಸ್, ಕಣ್ಣು ಮತ್ತು ಮೆದುಳಿಗೆ ಕ್ಷಿಪ್ರವಾಗಿ ದಾಳಿ ಮಾಡುತ್ತದೆ. ಇದರ ರೋಗಪತ್ತೆ ಹಾಗೂ ನಿರ್ವಹಣೆಯಲ್ಲಿ ವಿಳಂಬ ಮಾಡಿದಲ್ಲಿ ದೀರ್ಘಾವಧಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ" ಎಂದು ಆಸ್ಪತ್ರೆಯ ಇಎನ್ಟಿ ತಜ್ಞ ಡಾ.ಸುರೇಶ್ ಸಿಂಗ್ ನರೂಕಾ ಹೇಳಿದ್ದಾರೆ.