ಕಾಂಗ್ರೆಸ್ ಆಡಳಿತದಲ್ಲಿ ಭಾರತ ಅರೆ-ಇಸ್ಲಾಮಿಕ್ ದೇಶವಾಗಿತ್ತು ಎಂದ ಬಿಜೆಪಿ

ಸಾಂದರ್ಭಿಕ ಚಿತ್ರ (source: PTI)
ಹೊಸದಿಲ್ಲಿ, ನ.14: ಅಟಲ್ ಬಿಹಾರಿ ವಾಜಪೇಯಿ ಆಡಳಿತಾವಧಿಯನ್ನು ಹೊರತುಪಡಿಸಿದರೆ 2014ಕ್ಕೆ ಮುನ್ನ ಭಾರತ ಕಾಂಗ್ರೆಸ್ ಆಡಳಿತದಲ್ಲಿ ಅರೆ ಇಸ್ಲಾಮಿಕ್ ದೇಶವಾಗಿತ್ತು ಎಂದು ಬಿಜೆಪಿ ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದೆ.
ಹಿಂದುತ್ವದ ಬಗೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿದ ಹೇಳಿಕೆಯ ಪರಿಣಾಮವಾಗಿ ಮಹಾರಾಷ್ಟ್ರದಲ್ಲಿ ಹಿಂಸಾಚಾರ ಭುಗಿಲೆದಿದ್ದೆ ಹಾಗೂ ರಾಜ್ಯಾದ್ಯಂತ ಹಲವು ದಾಂಧಲೆಗಳು ನಡೆದ ಬಳಿಕ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬಿಸಲಾಯಿತು ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಆರೋಪಿಸಿದ್ದಾರೆ.
"ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಭಾರತ ಭಾಗಶಃ ಮುಸ್ಲಿಂ ದೇಶವಾಗಿತ್ತು. ಇದನ್ನು ನಾನು ಸಂಪೂರ್ಣ ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ. ಏಕೆಂದರೆ ಶರೀಅತ್ ನಿಬಂಧನೆಗಳು ಸಂವಿಧಾನದ ಭಾಗವಾಗಿದ್ದವು" ಎಂದು ಪ್ರತಿಪಾದಿಸಿದರು. ತಲಾಖ್, ಹಜ್ ಸಬ್ಸಿಡಿ ಮಂಜೂರಾತಿಯಂಥ ಕ್ರಮಗಳನ್ನು ಉಲ್ಲೇಖಿಸಿ ಆ ಬಳಿಕ ಇದನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದರು.
ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಲು ರಾಜೀವ್ ಗಾಂಧಿ ಸರ್ಕಾರ ಜಾರಿಗೆ ತಂದ ಕಾನೂನನ್ನು ಉಲ್ಲೇಖಿಸಿದ ತ್ರಿವೇದಿ, ಶರೀಅತ್ ಕಾನೂನಿಗೆ ಪ್ರಾಮುಖ್ಯತೆ ನೀಡುವ ಸಲುವಾಗಿ ತೀರ್ಪನ್ನು ಧಿಕ್ಕರಿಸಲಾಯಿತು ಎಂದು ಅಭಿಪ್ರಾಯಪಟ್ಟರು. ಮುಸ್ಲಿಂ ದೇಶಗಳಲ್ಲಿ ಕೂಡಾ ಸುಪ್ರೀಂಕೋರ್ಟ್ ತೀರ್ಪನ್ನು ಧಿಕ್ಕರಿಸಿದ ನಿದರ್ಶನಗಳಿಲ್ಲ ಎಂದು ಪ್ರತಿಪಾದಿಸಿದರು. ಹಿಂದೂ ಧರ್ಮವನ್ನು ಅವಮಾನಿಸುವುದು ಕಾಂಗ್ರೆಸ್ನ ಡಿಎನ್ಎ ಎಂದು ವ್ಯಂಗ್ಯವಾಡಿದರು.