ತ್ರಿಪುರ ಪೊಲೀಸರು ನಮಗೆ 'ಬೆದರಿಕೆ' ಹಾಕಿದ್ದಾರೆ:ಮಹಿಳಾ ಪತ್ರಕರ್ತೆಯರ ಆರೋಪ
ಕೋಮುಗಲಭೆ ವರದಿ ಮಾಡಿದ್ದಕ್ಕೆ ಎಫ್ ಐಆರ್ ದಾಖಲು

photo: twitter, ಸ್ವರ್ಣಾ ಝಾ, ಸಮ್ಮೃದ್ಧಿ ಸಕುನಿಯಾ
ಅಗರ್ತಲ: ವಿಶ್ವ ಹಿಂದೂ ಪರಿಷತ್(ವಿಎಚ್ ಪಿ) ದೂರಿನ ನಂತರ ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆ ವರದಿ ಮಾಡುತ್ತಿದ್ದ ಇಬ್ಬರು ಮಹಿಳಾ ಪತ್ರಕರ್ತೆಯರ ವಿರುದ್ಧ ಪೊಲೀಸರು ರವಿವಾರ ಎಫ್ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದ್ದಾರೆ. ಪೊಲೀಸರು ಇಂದು ಮುಂಜಾನೆ ತಮ್ಮ ಹೋಟೆಲ್ಗೆ ಬಂದು "ಬೆದರಿಕೆ" ಹಾಕಿದ್ದಾರೆ ಎಂದು ಪತ್ರಕರ್ತೆಯರಾದ ಸಮ್ಮೃದ್ಧಿ ಸಕುನಿಯಾ ಹಾಗೂ ಸ್ವರ್ಣಾ ಝಾ ಆರೋಪಿಸಿದ್ದಾರೆ ಎಂದು NDTV ವರದಿ ಮಾಡಿದೆ.
"ಪೊಲೀಸರು ನಿನ್ನೆ [ಶನಿವಾರ] ರಾತ್ರಿ 10:30 ರ ಸುಮಾರಿಗೆ ಹೋಟೆಲ್ಗೆ ಬಂದರು ಹಾಗೂ ಬೆಳಿಗ್ಗೆ 5:30 ಕ್ಕೆ ಎಫ್ಐಆರ್ ಪ್ರತಿಯನ್ನು ನೀಡಿದರು" ಎಂದು ಸಕುನಿಯಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ನಾವು ರಾಜಧಾನಿ ಅಗರ್ತಲಾಕ್ಕೆ ತೆರಳಬೇಕಾಗಿತ್ತು. ಆದರೆ ಸಂಪೂರ್ಣ ಸಹಕಾರದ ಹೊರತಾಗಿಯೂ ನಾವು ತೆರಳಲು ಅವಕಾಶ ನೀಡಲಿಲ್ಲ. ವಿಚಾರಣೆಗಾಗಿ ಧರ್ಮನಗರ ಪೊಲೀಸ್ ಠಾಣೆಗೆ ಕರೆದೊಯುವುದಾಗಿ ನಮಗೆ ಹೇಳಿದರು ನಮ್ಮ ಹೋಟೆಲ್ ಹೊರಗೆ ಸುಮಾರು 16 ರಿಂದ 17 ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.
ಉತ್ತರ ತ್ರಿಪುರಾದ ದರ್ಗಾಬಝಾರ್ ಪ್ರದೇಶದಲ್ಲಿ ಮಸೀದಿಯೊಂದರ ಧ್ವಂಸ ಪ್ರಕರಣದ ವರದಿಗಳನ್ನು ಗೃಹ ಸಚಿವಾಲಯ ಕಸದ ಬುಟ್ಟಿಗೆ ಹಾಕಿದ್ದರೆ, ಸ್ವರ್ಣ ಝಾ ಅವರು ಸರಣಿ ಟ್ವೀಟ್ಗಳಲ್ಲಿ ಇಂತಹ ಆರೋಪಗಳ ಬಗ್ಗೆ ಸ್ಥಳೀಯರೊಂದಿಗೆ ತಾನು ಮಾತನಾಡಿರುವುದಾಗಿ ಹೇಳಿದ್ದರು.
ಝಾ ಅವರು ಎಫ್ಐಆರ್ (ಪ್ರಥಮ ಮಾಹಿತಿ ವರದಿ) ಪ್ರತಿಯನ್ನು ಹಂಚಿಕೊಂಡಿದ್ದಾರೆ ಹಾಗೂ ವಿಎಚ್ಪಿಯ ರ್ಯಾಲಿಯನ್ನು ಮತ್ತೊಂದು ಪೋಸ್ಟ್ನಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲಿ ಅವರು ಸ್ಥಳೀಯರು ಏನು ಹೇಳಿದ್ದರು ಎಂಬುದರ ಕುರಿತು ವಿವರಿಸಿದರು.
ದೂರು ದಾಖಲಾದ ಬಳಿಕ ಪೊಲೀಸರ ತಂಡ ವಿಚಾರಣೆಗೆ ತೆರಳಿತ್ತು. ಅವರನ್ನು ಇದುವರೆಗೆ ಬಂಧಿಸಿಲ್ಲ ಅಥವಾ ವಶಕ್ಕೆ ಪಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಸುಳ್ಳು ಸುದ್ದಿ ಪ್ರಸಾರ ಪ್ರಕರಣದಲ್ಲಿ ಇಬ್ಬರನ್ನೂ ವಿಚಾರಣೆಗೊಳಪಡಿಸಬಹುದು ಎಂದು ಮೂಲಗಳು ತಿಳಿಸಿವೆ.







